ರಾಂಚಿ, ಸೆ. 29 (DaijiworldNews/MB) : ಇಲ್ಲಿನ ಮಸೀದಯಲ್ಲಿ ಅಡಗಿದ್ದ ಸಂದರ್ಭದಲ್ಲಿ ಬಂಧಿಸಲ್ಪಟ್ಟು ಮೂರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದ, ತಬ್ಲೀಗಿ ಜಮಾತ್ ಸದಸ್ಯರಾದ 17 ಜನ ವಿದೇಶಿಯರನ್ನು ಬಿಡುಗಡೆ ಮಾಡುವಂತೆ ಜಾರ್ಖಂಡ್ ಕೋರ್ಟ್ ಆದೇಶ ನೀಡಿದೆ.
ಮೂರು ತಿಂಗಳುಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಈ 17 ಜನರನ್ನು ತಮ್ಮ ದೇಶಗಳಿಗೆ ತೆರಳಲು ಸಮ್ಮತಿಸಿದ ಇಲ್ಲಿನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಾಯೀಮ್ ಕೀರ್ಮಾನಿ ಅವರು ಅವರಿಗೆ ತಲಾ 2,200 ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.
ದೆಹಲಿಯಲ್ಲಿ ನಡೆದ ಜಮಾತ್ನ ಸಮಾವೇಶದಲ್ಲಿ ಮಲೇಷ್ಯಾ, ಬ್ರಿಟನ್, ನೆದರ್ಲೆಂಡ್ಸ್, ಜಾಂಬಿಯಾ ಹಾಗೂ ಕೆರಿಬಿಯನ್ ದ್ವೀಪ ರಾಷ್ಟ್ರಗಳಿಂದ ಬಂದಿದ್ದ ಈ ಜಮಾತ್ ಸದಸ್ಯರು ಭಾಗಿಯಾಗಿದ್ದರು. ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ಡೌನ್ ಹೇರಿದ ವೇಳೆ ಅಂತರರಾಜ್ಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇವರು ರಾಂಚಿಗೆ ತೆರಳಿ, ಅಲ್ಲಿನ ಮಸೀದಿಯಲ್ಲಿ ಅಡಗಿದ್ದರು ಎಂಬ ಆರೋಪ ಇವರ ಮೇಲೆ ಇತ್ತು.
ಅವರನ್ನು ಮಾರ್ಚ್ 30ರಂದು ಬಂಧಿಸಲಾಗಿದ್ದು ಜುಲೈ 15ರಂದು ಕೋರ್ಟ್ ಜಾಮೀನು ನೀಡಲಾಗಿತ್ತು.