ನವದೆಹಲಿ, ಸೆ 29(DaijiworldNews/PY): ಕೇಂದ್ರದ ಕೃಷಿ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ಗೆ 2019ರ ಲೋಕಸಭೆ ಚುನಾವಣೆಯ ಪ್ರಣಾಳಿಕೆ ಮುಖೇನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿತ್ತ ಸಚಿವೆ, 2019ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯ ವಿಭಾಗ 7 ಹಾಗೂ 9ನೇ ಪುಟದಿಂದ - ಕಾಂಗ್ರೆಸ್, ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳ ಕಾಯ್ದೆಯನ್ನು ರದ್ದುಪಡಿಸುತ್ತದೆ ಹಾಗೂ ರಫ್ತು ಹಾಗೂ ಅಂತರಾಜ್ಯ ವ್ಯಾಪಾರ ಸೇರಿದಂತೆ ಕೃಷಿ ಉತ್ಪನ್ನಗಳಲ್ಲಿ ವ್ಯಾಪಾರವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದೆ ಎಂದಿದ್ದಾರೆ.
ಹಾಗಿದ್ದಲ್ಲಿ, ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯ ಸಮಯದಲ್ಲಿ, ಜನರಿಗೆ ಸುಳ್ಳು ಭರವಸೆ ನೀಡಿ ಅಥವಾ ಕೇಂದ್ರದ ಕಾಯ್ದೆಗಳಿಗೆ ಪ್ರತಿಯಾಗಿ ಕಾನೂನುಗಳನ್ನು ರಚಿಸುವಂತೆ ರಾಜ್ಯಗಳನ್ನು ಕೇಳುವ ಮೂಲಕ ಅವರು ಈಗ ಜನರನ್ನು ಪ್ರಚೋದಿಸುತ್ತಿದ್ದಾರೆಯೇ? ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಯಾರು ಸಲಹೆ ನೀಡಿದ್ದಾರೆ ಎಂದು ಆಶ್ಚರ್ಯ ಪಡುತ್ತೀರಾ? ಎಂದು ಕೇಳಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡುವ ನಿಟ್ಟಿನಲ್ಲಿ ಪರ್ಯಾಯ ಕಾನೂನುಗಳನ್ನು ರಚಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದರು.