ಲಖನೌ, ಸೆ. 30 (DaijiworldNews/MB) : ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಲಖನೌನ ವಿಶೇಷ ನ್ಯಾಯಾಲಯ ಬುಧವಾರ ಪ್ರಕಟಿಸಲಿದ್ದು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಮಂದಿ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಲಯ ಈಗಾಗಲೇ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಇನ್ನು ಕೊರೊನಾ ದೃಢಪಟ್ಟು ಆಸ್ಪತ್ರೆಗೆ ಹಾಜರಾಗಿರುವ ಉಮಾ ಭಾರತಿ ಹಾಗೂ ಕಲ್ಯಾಣ್ ಸಿಂಗ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜಾರಾಗಲಿದ್ದಾರೆಯೇ ಎಂದು ಇನ್ನೂ ತಿಳಿದು ಬಂದಿಲ್ಲ.
ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಕೂಡಾ ಪ್ರಕರಣದ ಆರೋಪಿಯಾಗಿದ್ದಾರೆ. ಕಲ್ಯಾಣ್ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಾಬರಿ ಮಸೀದಿ ಧ್ವಂಸ ನಡೆಸಲಾಗಿತ್ತು.
ಸಿಬಿಐ, ವಿಶೇಷ ನ್ಯಾಯಾಲಯದ ಮುಂದೆ 351 ಸಾಕ್ಷಿಗಳನ್ನು ಹಾಗೂ 600 ದಾಖಲೆಗಳನ್ನು ಸಲ್ಲಿಸಿದ್ದು ಬಾಬ್ರಿ ಮಸೀದಿ ಧ್ವಂಸದ ಪಿತೂರಿ ನಡೆಸಿ ಕರ ಸೇವಕರಿಗೆ ಪ್ರಚೋನೆ ನೀಡಿದ ಆರೋಪದಲ್ಲಿ 48 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿತ್ತು. ಈ ಸುದಿರ್ಘವಾದ ವಿಚಾರಣೆಯ ಅವಧಿಯಲ್ಲಿ ಈ 48 ಆರೋಪಿಗಳ ಪೈಕಿ 17 ಜನರು ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮತ್ತು ರಾಯಬರೇಲಿಯಲ್ಲಿ ಎರಡು ದೂರು ದಾಖಲಾಗಿದ್ದು ಮೊದಲ ದೂರಿನಲ್ಲಿ ಕರಸೇವಕರ ವಿರುದ್ಧ ಹಾಗೂ ಮತ್ತೊಂದರಲ್ಲಿ ಅಡ್ವಾಣಿ, ಜೋಶಿ ಹೀಗೆ ಪ್ರಮುಖ ನಾಯಕರ ವಿರುದ್ಧ ದೂರು ದಾಖಲಿಸಲಾಗಿತ್ತು. 2017ರಲ್ಲಿ ಸುಪ್ರಿಂ ಕೋರ್ಟ್ ಈ ಎರಡು ದೂರನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಹಾಗೆಯೇ 2010ರಲ್ಲಿ ಬಿಜೆಪಿ ನಾಯಕರ ವಿರುದ್ಧದ ಆರೋಪ ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಕೂಡಾ ಸುಪ್ರೀಂ ರದ್ದುಪಡಿಸಿತ್ತು.
1992ರ ಡಿಸೆಂಬರ್ 6ರಂದು ನಡೆದಿದ್ದೇನು? - ಕರ ಸೇವಕರು ರಾಮಮಂದಿರವಿದ್ದ ಭೂಮಿಯಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂದು ಪ್ರತಿಪಾದಿಸಿ 1992ರ ಡಿಸೆಂಬರ್ 6ರಂದು, ಮಸೀದಿಯನ್ನು ಧ್ವಂಸ ಮಾಡಿದ್ದರು. ಕಳೆದ ವರ್ಷ ತೀರ್ಪು ನೀಡಿದ್ದ ಸುಪ್ರೀಂ ಅಯೋಧ್ಯೆಯಲ್ಲಿನ ಈ ವಿವಾದಾತ್ಮಕ ಭೂಮಿಯನ್ನು ಹಕ್ಕುದಾರಿಕೆಯನ್ನು ರಾಮಲಲ್ಲಾನಿಗೆ ನೀಡಿತು. ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಐದು ಎಕರೆ ನಿವೇಶನ ನೀಡಬೇಕು ಎಂದು ಆದೇಶಿಸಿತ್ತು. ಹಾಗೆಯೇ ಬಾಬ್ರಿ ಮಸೀದಿ ಧ್ವಂಸ ಕಾನೂನು ಉಲ್ಲಂಘನೆ ಎಂದು ತಿಳಿಸಿತ್ತು.