ಬೆಂಗಳೂರು, ಸೆ. 30 (DaijiworldNews/MB) : ಕೊರೊನಾ ಮಾರ್ಗಸೂಚಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಮಂಗಳವಾರ ತಜ್ಞರು ಮತ್ತು ಅಧಿಕಾರಿಗಳ ಸಭೆ ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಸಭೆ ಸಮಾರಂಭದ ಹೆಸರಲ್ಲಿ ಹೆಚ್ಚು ಜನ ಸೇರಲು ಅವಕಾಶ ಮಾಡಿಕೊಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಲಾಕ್ಡೌನ್ ತೆರವಿನ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಪ್ರಮಾಣ ಏರಿಕೆಯಾಗುತ್ತಿದೆ. ಎಷ್ಟು ಜಾಗೃತಿ ಕ್ರಮಗಳನ್ನು ಜನರಿಗೆ ತಿಳಿಸಿದರೂ ಕೂಡಾ ಹೆಚ್ಚಿನವರು ಮಾರ್ಗಸೂಚಿಗಳ ಉಲ್ಲಂಘನೆ ಮಾಡುತ್ತಲ್ಲೇ ಇದ್ದಾರೆ. ಇನ್ನು ಉಳಿದಿರುವ ಒಂದೇ ಮಾರ್ಗ, ಈ ಸಂದರ್ಭದಲ್ಲಿ ದಂಡ ಪ್ರಯೋಗ ಅನಿವಾರ್ಯವಾಗಿದೆ. ಹಾಗಾಗಿ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ವಿರುದ್ಧ ಇಡೀ ಜಗತ್ತು ಹೋರಾಡುತ್ತಿದೆ. ಮಾಸ್ಕ್ ಧರಿಸುವುದು ಅತೀ ಮುಖ್ಯ. ಜನರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಯಾವುದೇ ಸರ್ಕಾರವಾದರೂ ಕೊರೊನಾದಂತಹ ಈ ಭೀಕರ ವೈರಸ್ ವಿರುದ್ಧ ಹೋರಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.