ಬೆಂಗಳೂರು, ಸೆ. 30 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ 19 ವರ್ಷದ ದಲಿತ ಯುವತಿ ದೆಹಲಿಯಲ್ಲಿ ಮಂಗಳವಾರ ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದೆ. ಇನ್ನು ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಮಂಗಳವಾರ ರಾತ್ರಿ ಪೊಲೀಸರೇ ತರಾತುರಿಯಲ್ಲಿ ನಡೆಸಿ ಸಂತ್ರಸ್ಥೆಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ಅವರ ಮನೆಯಲ್ಲಿಯೇ ಬಂಧಿಯಾಗಿರಿಸಿದ್ದು ಈ ನಡೆ ದೇಶಾದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡೆಯನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಯುಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ''ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ನರೇಂದ್ರ ಮೋದಿ ಹಾಗೂ ಸಮಸ್ತ ಸಂಘ ಪರಿವಾರ ಕೂಡಾ ಹೊರಬೇಕಾಗುತ್ತದೆ. ತಕ್ಷಣ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕಿ ಉತ್ತರಪ್ರದೇಶವನ್ನು ರಕ್ಷಿಸಿ'' ಎಂದು ಹೇಳಿದ್ದಾರೆ.
''ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ. ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ. ಮೊದಲು ಇವರನ್ನು ವಜಾ ಮಾಡಿ'' ಎಂದು ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಸ್ ಎಂಬಲ್ಲಿ ತನ್ನ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಆಕೆಯ ದುಪ್ಪಟ್ಟದಿಂದಲ್ಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದ ದುರುಳರು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹಲ್ಲೆ ಮಾಡಿದ್ದಾರೆ. ಆಕೆ ಕಾಣದ ಕಾರಣ ತಾಯಿ ಯುವತಿಯನ್ನು ಸುತ್ತಮುತ್ತ ಹುಡುಕಾಡಿದ್ದು ಆ ಸಂದರ್ಭದಲ್ಲಿ ಯುವತಿ ಪ್ರಜ್ಞೆಯಿಲ್ಲದೆ ಬಿದ್ದರುವುದು ಕಂಡು ಬಂದಿದೆ ಎಂದು ವರದಿ ತಿಳಿಸಿದೆ.
ನಿರ್ಭಯ ಪ್ರಕರಣವನ್ನು ನೆನಪಿಸುವಂತಹ ಈ ಪೈಶಾಚಿಕ ಸಾಮೂಹಿಕ ಅತ್ಯಾಚಾರ ನಡೆಸಿದ ದುರುಳರು ಯುವತಿಯ ಮೂಳೆ ಮುರಿಯುವಂತೆ ಹಾಗೂ ನಾಲಿಗೆ ತುಂಡಾಗುವಂತೆ ಚಿತ್ರಹಿಂಸೆ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒತ್ತಡ ಹೆಚ್ಚಾದ ಮೇರೆಗೆ ನಾಲ್ಕೈದು ದಿನಗಳ ನಂತರ ದೂರು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.