ಲಕ್ನೋ, ಸೆ. 30 (DaijiworldNews/MB) : ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಪ್ರಕಟಿಸಿದ ಲಖನೌನ ವಿಶೇಷ ನ್ಯಾಯಾಲಯ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಮಂದಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ. ನ್ಯಾಯಾಲಯವು ಈ ಎಲ್ಲಾ ಆರೋಪಿಗಳು ದೋಷಮುಕ್ತ ಎಂದು ಹೇಳಿದೆ. ಈ ಮೂಲಕ ಸುಮಾರು 28 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಇಂದು ತಾತ್ವಿಕ ಅಂತ್ಯ ದೊರೆತಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಒಂದು ಆಕಸ್ಮಿಕ ಘಟನೆ, ಇದು ಪೂರ್ವ ನಿಯೋಜಿತ ಕೃತ್ಯವಲ್ಲ, ಆರೋಪಿಗಳ ವಿರುದ್ಧ ಯಾವುದೇ ಪ್ರಬಲ ಸಾಕ್ಷಿಗಳಿಲ್ಲ ಎಂದು ನ್ಯಾಯಮೂರ್ತಿ ಯಾದವ್ ತೀರ್ಪು ಪ್ರಕಟಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಸಿಬಿಐ, ವಿಶೇಷ ನ್ಯಾಯಾಲಯದ ಮುಂದೆ 351 ಸಾಕ್ಷಿಗಳನ್ನು ಹಾಗೂ 600 ದಾಖಲೆಗಳನ್ನು ಸಲ್ಲಿಸಿದ್ದು ಬಾಬ್ರಿ ಮಸೀದಿ ಧ್ವಂಸದ ಪಿತೂರಿ ನಡೆಸಿ ಕರ ಸೇವಕರಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ 48 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿತ್ತು. ಈ ಸುದೀರ್ಘವಾದ ವಿಚಾರಣೆಯ ಅವಧಿಯಲ್ಲಿ ಈ 48 ಆರೋಪಿಗಳ ಪೈಕಿ 17 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಲಖನೌ ಮತ್ತು ರಾಯಬರೇಲಿಯಲ್ಲಿ ಎರಡು ದೂರು ದಾಖಲಾಗಿದ್ದು ಮೊದಲ ದೂರಿನಲ್ಲಿ ಕರಸೇವಕರ ವಿರುದ್ಧ ಹಾಗೂ ಮತ್ತೊಂದರಲ್ಲಿ ಅಡ್ವಾಣಿ, ಜೋಶಿ ಹೀಗೆ ಪ್ರಮುಖ ನಾಯಕರ ವಿರುದ್ಧ ದೂರು ದಾಖಲಿಸಲಾಗಿತ್ತು. 2017ರಲ್ಲಿ ಸುಪ್ರಿಂ ಕೋರ್ಟ್ ಈ ಎರಡು ದೂರನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಹಾಗೆಯೇ 2010ರಲ್ಲಿ ಬಿಜೆಪಿ ನಾಯಕರ ವಿರುದ್ಧದ ಆರೋಪ ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಕೂಡಾ ಸುಪ್ರೀಂ ರದ್ದುಪಡಿಸಿತ್ತು.
1992ರ ಡಿಸೆಂಬರ್ 6ರಂದು ನಡೆದಿದ್ದೇನು? - ಕರ ಸೇವಕರು ರಾಮಮಂದಿರವಿದ್ದ ಭೂಮಿಯಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂದು ಪ್ರತಿಪಾದಿಸಿ 1992ರ ಡಿಸೆಂಬರ್ 6ರಂದು, ಮಸೀದಿಯನ್ನು ಧ್ವಂಸ ಮಾಡಿದ್ದರು. ಕಳೆದ ವರ್ಷ ತೀರ್ಪು ನೀಡಿದ್ದ ಸುಪ್ರೀಂ ಅಯೋಧ್ಯೆಯಲ್ಲಿನ ಈ ವಿವಾದಾತ್ಮಕ ಭೂಮಿಯನ್ನು ಹಕ್ಕುದಾರಿಕೆಯನ್ನು ರಾಮಲಲ್ಲಾನಿಗೆ ನೀಡಿತು. ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಐದು ಎಕರೆ ನಿವೇಶನ ನೀಡಬೇಕು ಎಂದು ಆದೇಶಿಸಿತ್ತು. ಹಾಗೆಯೇ ಬಾಬ್ರಿ ಮಸೀದಿ ಧ್ವಂಸ ಕಾನೂನು ಉಲ್ಲಂಘನೆ ಎಂದು ತಿಳಿಸಿತ್ತು. ಇದೀಗ ಈ ಪ್ರಕರಣದ ತೀರ್ಪು ನೀಡಿರುವ ಲಕ್ನೋ ನ್ಯಾಯಾಲಯ ಈ ಪ್ರಕರಣದಲ್ಲಿ ಆರೋಪಿಗಳು ದೋಷಮುಕ್ತರೆಂದು ಹೇಳಿ ಪ್ರಕರಣ ಖುಲಾಸೆಗೊಳಿಸಿದೆ.