ಲಕ್ನೋ, ಸೆ 30(DaijiworldNews/PY): ಹತ್ರಸ್ ಗ್ರಾಮದಲ್ಲಿ ದಲಿತ ಯುವತಿಯ ಸಾಮೂಹಿಕ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದ್ದು, ಹತ್ರಸ್ ಅತ್ಯಾಚಾರ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದು, ಮೂವರು ಅಧಿಕಾರಿಗಳಿರುವ ಎಸ್ಐಟಿ ಈ ಪ್ರಕರಣದ ತನಿಖೆ ನಡೆಸಲಿದೆ. ಈ ತಂಡದಲ್ಲಿ ಉತ್ತರ ಪ್ರದೇಶದ ಗೃಹ ಇಲಾಖೆ ಕಾರ್ಯದರ್ಶಿ ಭಗವಾನ್ ಸ್ವರೂಪ್, ಡಿಐಜಿ ಚಂದ್ರ ಪ್ರಕಾಶ್, ಐಪಿಎಸ್ ಅಧಿಕಾರಿ ಪೂನಂ ಅವರನ್ನೊಳಗೊಂಡಿದ್ದು, 7 ದಿನಗಳಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದೆ.
ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸುವಂತೆ ಯುಪಿ ಸಿಎಂ ಸೂಚನೆ ನೀಡಿದ್ದಾರೆ ಎಂದಿ ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.
ಸೆಪ್ಟೆಂಬರ್ 14ರಂದು ಹತ್ರಸ್ನಲ್ಲಿ 19 ವರ್ಷದ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಹಲ್ಲೆಗೊಳಗಾಗಿದ್ದಳು. ಆಕೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ಆಕೆ ಸಾವನ್ನಪ್ಪಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.