ಲಖನೌ, ಸೆ. 30 (DaijiworldNews/MB) : ಸುಮಾರು 28 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬುಧವಾರ ಬಂದಿದ್ದು ಬಿಜೆಪಿಯ ರಾಜಕೀಯ ಭೀಷ್ಮ ಎಂದೇ ಕರೆಯಲ್ಪಡುವ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ 32 ಮಂದಿ ಆರೋಪಿಗಳ ವಿರುದ್ದದ ಪ್ರಕರಣ ಖುಲಾಸೆಯಾಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎಲ್ ಕೆ ಅಡ್ವಾಣಿ ಅವರು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ರಾಮ ಜನ್ಮಭೂಮಿ ಹೋರಾಟದಲ್ಲಿ ವೈಯಕ್ತಿಕವಾಗಿ ನಾನು ಹಾಗೂ ಬಿಜೆಪಿಯ ಬದ್ದತೆ ಹಾಗೂ ನಮಗಿದ್ದ ನಂಬಿಕೆಗೆ ಸಂದ ಜಯ ಇದಾಗಿದೆ ಎಂದು ಹೇಳಿದ್ದಾರೆ.
ಕೋರ್ಟ್ ತೀರ್ಪು ಹೊರಬಂದು ಜಯ ಸಿಗುತ್ತಿದ್ದಂತೆ ದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸದಲ್ಲಿ ಸಿಹಿತಿಂಡಿ ಹಂಚಿ ಸಂಭ್ರಮಪಟ್ಟರು.
ಇನ್ನು ಈ ತೀರ್ಪಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ, ತೀರ್ಪಿನಿಂದ ನಮಗೆ ಸಂತಸವಾಗಿದೆ. ಈ ಮಸೀದಿ ಧ್ವಂಸ ಪ್ರಕರಣದಲ್ಲಿ ಯಾವುದೇ ಪಿತೂರಿಯಿರಲಿಲ್ಲ ಎಂಬುದನ್ನು ತೀರ್ಪು ಸಾಬೀತುಪಡಿಸಿದೆ. ಇದು ನ್ಯಾಯಾಲಯದ ಐತಿಹಾಸಿಕ ತೀರ್ಪು. ನಮ್ಮ ಕಾರ್ಯಕ್ರಮ ಯಾವುದೇ ಪಿತೂರಿಯಿಂದ ನಡೆಸಿರಲಿಲ್ಲ. ಇನ್ನು ರಾಮ ಮಂದಿರ ನಿರ್ಮಾಣದತ್ತ ನಮ್ಮ ಚಿತ್ತವಿರಲಿ ಎಂದು ಹೇಳಿದ್ದಾರೆ.