ನವದೆಹಲಿ, ಸೆ. 30 (DaijiworldNews/SM): ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಬಹುತೇಕ ಕಾರ್ಯ ಚಟುವಟಿಕೆಗಳು ನಿರ್ದಿಷ್ಟ ನಿರ್ಬಂಧಗಳೊಂದಿಗೆ ಪುನರಾರಂಭಗೊಳ್ಳುತ್ತಿವೆ. ಇದೀಗ ಅನ್ಲಾಕ್ 5 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಿನಿಮಾ ಹಾಲ್ ಗಳು ಹಾಗೂ ಮನರಂಜನಾ ಪಾರ್ಕ್ ಗಳನ್ನು ಪುನರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 15ರಿಂದ ಸಿನೆಮಾ ಹಾಲ್ಗಳು, ಮಲ್ಟಿಪ್ಲೆಕ್ಸ್ಗಳು, ಎಕ್ಸಿಬಿಷನ್ ಹಾಲ್ಗಳು ಮತ್ತು ಮನರಂಜನಾ ಪಾರ್ಕ್ ಗಳು ಪುನರಾರಂಭಗೊಳ್ಳಲಿದ್ದು, ಶೇ. 50ರಷ್ಟು ಆಸನ ಸಾಮರ್ಥ್ಯವನ್ನು ತುಂಬಿಸಿಕೊಳ್ಳಲು ಅವಕಾಶವಿರಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಅನ್ಲಾಕ್ 5 ರ ಮಾರ್ಗಸೂಚಿಗಳ ಪ್ರಕಾರ ಶಾಲೆ, ಕಾಲೇಜುಗಳನ್ನು ಮತ್ತೆ ಆರಂಭಿಸಲು ಅವಕಾಶವಿದೆ. ಅಕ್ಟೋಬರ್ 15 ರಿಂದ ಶಾಲೆ, ಕಾಲೇಜುಗಳನ್ನು ಮತ್ತೆ ತೆರೆಯಬಹುದೆಂದು ಉಲ್ಲೇಖಿಸಲಾಗಿದೆ. ಆದರೆ ಅಂತಿಮ ನಿರ್ಧಾರವನ್ನು ಮಾತ್ರ ಕೇಂದ್ರ ಸರಕಾರ ಆಯಾ ರಾಜ್ಯಗಳಿಗೆ ಮತ್ತು ಸಂಸ್ಥೆಗಳಿಗೆ ನೀಡಿದೆ.
ಇನ್ನು ಕ್ರೀಡಾಪಟುಗಳ ತರಬೇತಿಗಾಗಿ ಬಳಸುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗುವುದು, ಇದಕ್ಕಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸುತ್ತದೆ.