ಬೆಂಗಳೂರು, ಅ.01 (DaijiworldNews/HR): ಕಳೆದ ವರ್ಷ ನಾವು ದೊಡ್ಡ ಯುದ್ದ ಗೆದ್ದಿದ್ದೇವೆ, ಶಿರಾ, ರಾಜರಾಜೇಶ್ವರಿ ಉಪ ಚುನಾವಣೆಗಳ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಇದೊಂದು ಸಣ್ಣ ಪರೀಕ್ಷೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಮಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಬಿಜೆಪಿ ಯಾವುದೇ ಚುನಾವಣೆಯನ್ನು ಹಗುರವಾಗಿ ಸ್ವೀಕರಿಸಿಲ್ಲ, ಪ್ರತಿ ಚುನಾವಣೆಯೂ ನಮಗೆ ಸವಾಲಾಗಿದೆ, ಈ ಉಪ ಚುನಾವಣೆಗೆ ಹಲವು ಆಕಾಂಕ್ಷಿಗಳಿದ್ದಾರೆ. ರಾಜ್ಯ ಕೋರ್ ಕಮಿಟಿಯು ಅಭ್ಯರ್ಥಿಗಳ ಪಟ್ಟಿ ಮಾಡಿ ಸಂಸದೀಯ ಸಮಿತಿಗೆ ಕಳುಹಿಸಲಿದ್ದು, ಸಂಸದೀಯ ಸಮಿತಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ, ಯಾರೇ ಸ್ಪರ್ಧಿಸಿದರೂ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ಉಪಚುನಾವಣೆಯಲ್ಲಿ ಪಕ್ಷ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ವರ್ಷ ನಡೆದ ಉಪ ಚುನಾವಣೆಗೆ ಹೋಲಿಸಿದರೇ ಈಗ ನಡೆಯುತ್ತಿರುವುದು ಸಣ್ಣ ಪರೀಕ್ಷೆ ಎಂದು ಹೇಳಿದ್ದಾರೆ.
ಬಿಜೆಪಿ ಪಾಲಿಗೆ ಶಿರಾ ಕ್ಷೇತ್ರದ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ, ಬಿಜೆಪಿ ಈ ಕ್ಷೇತ್ರದಲ್ಲಿ ಯಾವತ್ತೂ ಗೆಲುವು ಸಾಧಿಸಿಲ್ಲ, ಶಿರಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಹೇಳಿದ್ದಾರೆ.