ಮಥುರಾ, ಅ 01(DaijiworldNews/PY): ಕೃಷ್ಣ ಜನ್ಮಭೂಮಿಯ ಪಕ್ಕಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಸಲ್ಲಿಕೆಯಾದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಮಥುರಾ ಜಿಲ್ಲಾ ಸಹಾಯಕ ನ್ಯಾಯಾಧೀಶ ಛಯ್ಯಾ ಶರ್ಮಾ ಅವರು ಅರ್ಜಿಯ ವಿಚಾರಣೆ ನಡೆಸಿದ್ದು, 1991ರ ಪ್ರಾರ್ಥನಾ ಸ್ಥಳಗಳ ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಮಸೀದಿಯನ್ನು ತೆರವು ಮಾಡಲು ಸಲ್ಲಿಕೆಯಾದ ಅರ್ಜಿಯನ್ನು ಮಾನ್ಯ ಮಾಡಲು ಅಸಾಧ್ಯ ಎಂದಿದ್ದಾರೆ.
ಶ್ರೀ ಕೃಷ್ಣ ಜನ್ಮಸ್ಥಾನ ಪರ ಹೋರಾಟದ ಭಾಗವಾದ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಅವರು ನ್ಯಾಯಾಲಯದ ತೀರ್ಮಾನದ ಬಗ್ಗೆ ಮಾತನಾಡಿದ್ದು, ನ್ಯಾಯಾಲಯದ ಆದೇಶದ ವಿಚಾರವಾಗಿ ಅ.15ರಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಮಥುರಾದ ವಶಕ್ಕೆ ಅವಶ್ಯಕವಾದ ಹೋರಾಟದ ವಿಚಾರವಾಗಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಹಾಗೂ ಶಾಹಿ ದರ್ಗಾದ ಆಡಳಿತ ಟ್ರಸ್ಟ್ ಅನ್ನು ಈ ವ್ಯಾಜ್ಯದಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಮಸೀದಿಯ 13.37 ಎಕರೆ ಜಮೀನನ್ನು ದೇವಾಲಯಕ್ಕೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಅಯೋಧ್ಯೆಯ ರಾಮ ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಿದೆ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದ ನಂತರ ಈ ಅರ್ಜಿ ಸಲ್ಲಿಕೆಯಾಗಿತ್ತು.