ತುಮಕೂರು, ಅ. 01 (DaijiworldNews/MB) : 2018 ರ ವಿಧಾನಸಭೆ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ಮುಖ್ಯಮಂತ್ರಿ ಆಗುವ ಆಫರ್ ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬುಧವಾರ ಶಿರಾದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು 2018 ರ ವಿಧಾನಸಭೆ ಚುನಾವಣೆಯ ಬಳಿಕ ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು. ನರೇಂದ್ರ ಮೋದಿಯವರೇ ಈ ಆಫರ್ ನೀಡಿದ್ದರು. ಐದು ವರ್ಷ ನೀವೇ ಮುಖ್ಯಮಂತ್ರಿಯಾಗಿರುತ್ತೀರಿ. ನಿಮಗ್ಯಾರು ಅಡ್ಡ ಬರಲ್ಲ ಎಂದು ಕೂಡಾ ಹೇಳಿದ್ದರು ಎಂದು ಹೆಚ್ಡಿಕೆ ಹೇಳಿದ್ದಾರೆ.
ನನಗೆ ಸಿಎಂ ಆಗುವ ಯಾವುದೇ ಆಸೆ ಇರಲಿಲ್ಲ. ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯವೇ ಬೇಡ ಎಂದು ನಿರ್ಧರಿಸಿದ್ದೆ. ಆದರೆ ಕಾಂಗ್ರೆಸ್ನವರು ಒಮ್ಮೆಲೇ ಕರೆ ಮಾಡಿ ಆತುರಾತುರವಾಗಿ ಬರಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವಂತೆ ದೇವೇಗೌಡರು ಒತ್ತಾಯಿಸಿದರು. ಆದರೆ ಅವರು ಕೇಳಲೇ ಇಲ್ಲ. ನನ್ನನ್ನೇ ಸಿಎಂ ಆಗಿ ಮಾಡಿಬಿಟ್ಟರು. ನನಗೆ ಸಿಎಂ ಆಗುವ ಯಾವ ಬಯಕೆಯೂ ಇರಲಿಲ್ಲ. ಆದರೆ ಮುಖ್ಯಮಂತ್ರಿಯಾದರೆ ರೈತರಿಗೆ ಸಹಾಯ ಮಾಡಲು ಅನುಕೂಲ ಎಂಬ ಕಾರಣಕ್ಕೆ ನಾನು ಸಿಎಂ ಆಗಲು ಒಪ್ಪಿಕೊಂಡೆ. ಆದರೆ ಕೆಲವು ನಾಯಕರುಗಳ ಸಂಕುಚಿತ ಮನಸ್ಸಿನಿಂದಾಗಿ ಸರ್ಕಾರ ನಡೆಸಲಾಗಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಬಿಎಸ್ವೈ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಿಎಸ್ವೈ ಸರ್ಕಾರ ಜನಪರ ಯೋಜನೆಗಳನ್ನು ಕೈಬಿಟ್ಟದೆ ಎಂದು ಹೇಳಿದರು. ಹಾಗೆಯೇ ಸಿಎಂ ಪುತ್ರ ವಿಜಯೇಂದ್ರರನ್ನು ಟೀಕಿಸಿ, ಹಣಕ್ಕೆ ಮತವನ್ನು ಮಾರಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.