ನವದೆಹಲಿ, ಅ. 01 (DaijiworldNews/MB) : ಬಿಜೆಪಿಯ ಘೋಷಣೆ ಬೇಟಿ ಬಚಾವೋ ಅಲ್ಲ, ಸತ್ಯ ಮರೆಮಾಡಿ, ಅಧಿಕಾರ ಉಳಿಸಿ ಎಂಬುದಾಗಿದೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಮರೆಯುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಮತ್ತೋರ್ವ ದಲಿತ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆ. ಬಲರಾಮಪುರ ಜಿಲ್ಲೆಯ ಗೈಸರಿ ಗ್ರಾಮದ 22 ವರ್ಷದ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ.ಹಾಗೆಯೇ ಹತ್ರಸ್ ಅತ್ಯಾಚಾರ ಪ್ರಕರಣದಲ್ಲಿ ಸಾವನ್ನಪ್ಪಿದ ಯುವತಿಯ ಅಂತಿಮ ಸಂಸ್ಕಾರ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡದೆ, ರಾತ್ರೋರಾತ್ರಿ ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಯುಪಿ ಸರ್ಕಾರವನ್ನು ಟೀಕಿಸಿರುವ ರಾಹುಲ್ ಗಾಂಧಿ, ಯುಪಿಯ ಜಂಗಲ್ ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಕಿರುಕುಳ ಹಾಗೂ ಸರ್ಕಾರದ ಹಗರಣಗಳು ಮುಂದುವರೆದಿದೆ. ಜೀವಂತವಾಗಿರುವಾಗಲೂ ಗೌರವ ನೀಡಿಲ್ಲ. ಅಂತಿಮ ಸಂಸ್ಕಾರದ ಗೌರವವನ್ನು ಕಸಿದುಕೊಂಡರು. ಬಿಜೆಪಿಯ ಘೋಷಣೆ ಬೇಟಿ ಬಚಾವೋ ಅಲ್ಲ, ಸತ್ಯ ಮರೆಮಾಡಿ, ಅಧಿಕಾರ ಉಳಿಸಿ ಎಂಬುದಾಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಹತ್ರಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್ಐಟಿ ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಯುತ್ತಿದೆ. ಹಾಗೆಯೇ ಆದಿತ್ಯನಾಥ್ ಅವರು ಮೃತ ಯುವತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ್ದಾರೆ.