ಬೆಂಗಳೂರು, ಅ 01(DaijiworldNews/PY): ಬೆಂಗಳೂರು ಭಯೋತ್ಪಾದನಾ ಕೇಂದ್ರ ಎಂಬ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಯುವಮೊರ್ಚಾ ನೂತನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಯುವಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡರು. ಬೆಂಗಳೂರಿನ ಪೊಲೀಸ್ ಠಾಣೆಯೊಂದನ್ನು ಧ್ವಂಸ ಮಾಡಲು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಾರೆ ಎನ್ನುವ ಸುದ್ದಿ ಕೇಳಿ ನನ್ನ ಕುದಿಯುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್, ಪಿಎಫ್ಐ ಹಾಗೂ ಎಸ್ಡಿಪಿಐ ಗೂಂಡಾಗಿರಿಗೆ ಕುಮ್ಮಕ್ಕು ನೀಡುತ್ತಿದೆ. ಈ ಮೂರು ರಾಜಕೀಯ ಸಂಘಟನೆಗಳು ಯಾವಾಗಲೂ ರಾಷ್ಟ್ರೀಯತೆಯ ಮೇಲೆ ಆಕ್ರಮಣ ಮಾಡಲು ಅವಕಾಶವನ್ನು ಹುಡುಕುತ್ತಿವೆ ಎಂದು ಹೇಳಿದರು.
ನಮ್ಮ ದೇಶದ ಭದ್ರತೆಯನ್ನು ದುರ್ಬಲಗೊಳಿಸಲು ಅವರು ಒಟ್ಟಾಗಿ ಕೆಲಸ ಮಾಡುತ್ತಾರೆ. ರಾಷ್ಟ್ರೀಯವಾದಿಗಳು ಪಿಎಫ್ಐ ಅಥವಾ ಎಸ್ಡಿಪಿಐ ಅನ್ನು ಭಯೋತ್ಪಾದಕ ಸಂಘಟನೆಗಳೆಂದು ಕರೆಯುವಾಗಲೆಲ್ಲಾ, ಕಾಂಗ್ರೆಸ್ ಎಲ್ಲಿಯೂ ಹೊರಗೆ ಬರುವುದಿಲ್ಲ ಎಂದು ಆರೋಪಿಸಿದರು.
ತನ್ನದೇ ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನು ಸಹ ರಕ್ಷಿಸಲು ಸಾಧ್ಯವಾಗದ ಪಕ್ಷವು ಈ ರಾಜ್ಯದಲ್ಲಿ ಯಾರ ರಕ್ಷಣೆ ಮಾಡುತ್ತದೆ? ಎಂದು ಕೇಳಿದರು.