ಬೆಂಗಳೂರು, ಅ 01(DaijiworldNews/PY): ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1000 ರೂ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರು ನಿರ್ಲಕ್ಷ್ಯ ವಹಿಸಲು ಪ್ರಾರಂಭಿಸಿದ್ದಾರೆ. ಈ ರೀತಿ ನಿರ್ಲಕ್ಷ್ಯ ವಹಿಸಿಸುವವರ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳು ನಿರ್ಧರಿಸಿದೆ ಎಂದರು.
ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮ, ವಿವಾಹ ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಜನರು ಭಾಗವಹಿಸುವುದಕ್ಕೆ ರಾಜ್ಯ ಸರ್ಕಾರ ಮತ್ತೆ ಭಾಗಶಃ ನಿಷೇಧ ಹೇರಿದೆ ಎಂದರು.
ಇಂತಹ ಸಮಾರಂಭಗಳಲ್ಲಿ 50ಕ್ಕೂ ಆದಿಕ ಮಂದಿ ಭಾಗವಹಿಸುವಂತಿಲ್ಲ. ಒಂದು ವೇಳೆ ಹೆಚ್ಚಿನ ಜನ ಕಂಡುಬಂದಲ್ಲಿ ಸಂಘಟಕರು ಅಥವಾ ಸಂಸ್ಥೆಯ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರಿಗೆ ಬಸ್ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶವಿದೆ. ಇನ್ನು ಮುಂದೆ ಕಡ್ಡಾಯವಾಗಿ ಶೇ.50ರಷ್ಟು ಜನರನ್ನು ಮಾತ್ರವೇ ಹತ್ತಿಸಿಕೊಳ್ಳಬೇಕು. ಮಾಸ್ಕ್ ಧರಿಸಿದವರಿಗೆ ಮಾತ್ರ ಬಸ್ ಒಳಗೆ ಪ್ರವೇಶ ನೀಡುವಂತೆ ನಿರ್ವಾಹಕರಿಗೆ ಸೂಚನೆ ನೀಡಲಾಗುವುದು. ಎಲ್ಲಾ ಸರ್ಕಾರಿ ನೌಕರರು ಮಾಸ್ಕ್ ಧರಿಸಬೇಕು. ಒಂದು ವೇಳೆ ಮಾಸ್ಕ್ ಧರಿಸದೇ ಇರುವುದು ಕಂಡುಬಂದಲ್ಲಿ ಅವರಿಗೆ ಕಚೇರಿ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದರು.