ಹತ್ರಸ್, ಅ 01(DaijiworldNews/PY): ಹತ್ರಸ್ನ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ವಿಚಾರವನ್ನು ಆಲಿಘಡದ ಆಸ್ಪತ್ರೆಯ ವೈದ್ಯಕೀಯ ವರದಿ ಖಚಿತಪಡಿಸಿಲ್ಲ ಎಂದು ಗುರುವಾರ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವಿರ್ ಹೇಳಿದ್ದಾರೆ.
ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ವರದಿಯಲ್ಲಿ, ಯುವತಿಗೆ ಗಾಯಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅತ್ಯಾಚಾರವೆಸಗಿರುವ ಬಗ್ಗೆ ಖಚಿತಪಡಿಸಿಲ್ಲ. ನಾವು ವಿಧಿವಿಜ್ಞಾನದ ವರದಿಗಾಗಿ ಕಾಯುತ್ತಿದ್ದೇವೆ. ಅತ್ಯಾಚಾರವೆಸಗಿರುವ ಬಗ್ಗೆ ವೈದ್ಯರೂ ಕೂಡಾ ದೃಢಪಡಿಸಿಲ್ಲ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ರಚಿಸಿದ ವಿಶೇಷ ತನಿಖಾ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಕುಟುಂಬದೊಂದಿಗೆ ಬುಧವಾರ ಮಾತುಕತೆ ನಡೆಸಿದೆ. ಮೂರು ತಂಡ ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದೆ. ತನಿಖೆ ಮುಂದುವರೆದಿದೆ. ಹತ್ರಸ್ನ ಗಡಿ ಭಾಗಗಳನ್ನು ಬಂದ್ ಮಾಡಲಾಗಿದೆ. ಜಿಲ್ಲೆಯಲ್ಲಿ ಸಿಆರ್ಪಿಸಿಯ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಹತ್ರಸ್ನಲ್ಲಿ ಐದಕ್ಕಿಂತ ಹೆಚ್ಚು ಮಂದಿ ಸೇರಲು ಅವಕಾಶವಿಲ್ಲ. ಮಾಧ್ಯಮಗಳಿಗೂ ಕೂಡಾ ಅನುಮತಿ ಇಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ಉತ್ತರಪ್ರದೇಶ ಸರ್ಕಾರ, ಮೃತಪಟ್ಟ ಯುವತಿಯ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ಧನ, ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ತಿಳಿಸಿದೆ.
ಘಟನೆಯ ಬಗ್ಗೆ ನ್ಯಾಯಾಲಯದಲ್ಲಿ ತ್ವರಿತಗತಿಯ ವಿಚಾರಣೆ ನಡೆಸಲಾಗುವುದು ಎಂದು ಯುಪಿ ಸರ್ಕಾರ ತಿಳಿಸಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರೂ ಕೂಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂತ್ರಸ್ತೆಯ ಕುಟುಂಬದೊಂದಿಗೆ ಮಾತನಾಡಿದ್ದಾರೆ.
19 ವರ್ಷದ ಯುವತಿ ದೆಹಲಿಯ ಸಪ್ಧರ್ ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪುವ ಮೊದಲು ಆಲಿಘಡ ಮುಸ್ಲಿಂ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಚಿಕಿತ್ಸೆ ಪಡೆಯುತ್ತಿದ್ದರು.