ಬೆಂಗಳೂರು, ಅ. 01 (DaijiworldNews/MB) : ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಮತ್ತು ಕಾರ್ಮಿಕ ವಿವಾದಗಳ ಕಾಯ್ದೆಗಳ ತಿದ್ದುಪಡಿ ಜಾರಿಗೆ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಾಲ್ಕು ತಿಂಗಳ ಹಿಂದೆ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿ ಜಾರಿಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಈ ತಿದ್ದುಪಡಿ ಮಸೂದೆಗಳಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ಕೂಡಾ ವಿಧಾನ ಪರಿಷತ್ ಅಂಗೀಕಾರ ಇನ್ನೂ ಬಾಕಿಯಿದೆ. ವಿಧಾನ ಪರಿಷತ್ನಲ್ಲಿ ಮತ ವಿಭಜನೆಯಲ್ಲಿ ಕಾರ್ಮಿಕ ವಿವಾದಗಳು ಮತ್ತು ಇತರ ಕೆಲವು ಕಾನೂನುಗಳ (ಕರ್ನಾಟಕ ತಿದ್ದುಪಡಿ) ಮಸೂದೆ ತಿರಸ್ಕಾರವಾಗಿದೆ. ಈಗ ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿಯನ್ನು ಜಾರಿಯಲ್ಲಿಡಲು ಮತ್ತು ಕಾರ್ಮಿಕ ಕಾಯ್ದೆಯ ತಿದ್ದುಪಡಿ ಜಾರಿಗೆ ಮತ್ತೆ ಸುಗ್ರೀವಾಜ್ಞೆ ಹೊರಡಿಸುವಂತೆ ಸಭೆಯಲ್ಲಿ ತೀರ್ಮಾಣ ಕೈಗೊಳ್ಳಲಾಗಿದೆ.
ಹಾಗೆಯೇ ಸಂಪುಟ ಸಭೆಯಲ್ಲಿ ಕ್ರೀಡಾಪಟುಗಳನ್ನು ಪಿಎಸ್ಐ ಮತ್ತು ಡಿವೈಎಸ್ಪಿ ಹುದ್ದೆಗಳಿ ನೇರ ನೇಮಕಾತಿಗೆ ಅವಕಾಶ ಕಲ್ಪಿಸುವ ವಿಶೇಷ ನಿಯಮಗಳು, ಮೌಲಾನಾ ಆಜಾದ್ ಟ್ರಸ್ಟ್ ಹಾಗೂ ಡಾ.ಜಗಜೀವನ್ ರಾಂ ಸಂಶೋಧನಾ ಕೇಂದ್ರ ಸ್ಥಾಪನೆ, 4,636.50 ಕೋಟಿ ರೂಪಾಯಿ ವೆಚ್ಚದಲ್ಲಿ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮೂಲಕ 150 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಮೊದಲಾದ ಪ್ರಸ್ತಾಪಗಳನ್ನು ಸಮ್ಮತಿಸಲಾಗಿದೆ.