ನವದೆಹಲಿ, ಅ. 01 (DaijiworldNews/MB) : ನ್ಯಾಯಾಂಗ ನಿಂದನೆ ಪ್ರರಕಣಕ್ಕೆ ಸಂಬಂಧಿಸಿ ಆಗಸ್ಟ್ 31ರಂದು ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರಿಂ ಕೋರ್ಟ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ತೀರ್ಪು ನೀಡಿ ರೂ. 1 ದಂಡ ವಿಧಿಸಿತ್ತು. ನ್ಯಾಯಾಲಯವು ವಿಧಿಸಿದ್ದ ದಂಡವನ್ನು ಸೆ. 14 ರಂದು ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಪಾವತಿಸಿದ್ದರು ಬಳಿಕ 'ದಂಡ ಪಾವತಿಸಿದ ಮಾತ್ರಕ್ಕೆ ಕೋರ್ಟ್ ಆದೇಶವನ್ನು ಒಪ್ಪಿದ್ದೇನು ಎಂದು ಅರ್ಥವಲ್ಲ' ಎಂದು ಹೇಳಿದ್ದರು.
ಇದೀಗ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಪ್ರಶಾಂತ್ ಭೂಷಣ್ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು ಒಂದು ಅರ್ಜಿಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದ ವಿರುದ್ಧ ಆಗಸ್ಟ್ 14ರಂದು ನೀಡಿದ ತೀರ್ಪನ್ನು ಪ್ರಶ್ನಿಸಿದ್ದು ಇನ್ನೊಂದು ಅರ್ಜಿಯಲ್ಲಿ ಆಗಸ್ಟ್ 31ರಂದು ನೀಡಿದ ಶಿಕ್ಷೆ ಆದೇಶವನ್ನು ಪ್ರಶ್ನಿಸಲಾಗಿದೆ.
ಎರಡನೇ ಪರಿಶೀಲನಾ ಅರ್ಜಿಯನ್ನು ವಕೀಲರಾದ ಕಾಮಿನಿ ಜೈಸ್ವಾಲ್ ಅವರ ಮುಖೇನ ಸಲ್ಲಿಸಲಾಗಿದ್ದು ಅದರಲ್ಲಿ ಭೂಷಣ್ ಅವರು, ಈ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಮುಕ್ತ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆ ನಡೆಸಬೇಕು. ಈಗ ನೀಡಿರುವ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು. ಈ ಅರ್ಜಿಯಲ್ಲಿ ಮಾಡಲಾಗಿರುವ ಪ್ರಶ್ನೆಗಳ ವಿಚಾರಣೆ ನಡೆಸಲು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದ್ದಾರೆ.