ಬೆಂಗಳೂರು, ಅ. 01 (DaijiworldNews/MB) : ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು ಬಿಜೆಪಿ ಪಕ್ಷದಲ್ಲಿ ಗೊಂದಲವಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಯಾರೆಂದು ನಿರ್ಧರಿಸಲಾಗುವುದು. ಕೋರ್ ಕಮಿಟಿ ಸಭೆ ನಡೆಯಲಿದೆ. ಕಾದು ನೋಡೋಣ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.
ಗುರುವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಯಾರೆಂದು ವೈಯಕ್ತಿಕವಾಗಿ ನಾನಾಗಲಿ ಅಥವಾ ಯಾರೇ ಆಗಲಿ ಘೋಷಿಸಲಾಗುವುದಿಲ್ಲ. ಅದು ಪಕ್ಷದ ತೀರ್ಮಾನ. ಎಲ್ಲರೂ ಕೂತು ಚರ್ಚೆ ನಡೆಸಿ ತೀರ್ಮಾನಿಸುವಂತದ್ದು. ಹಾಗಾಗಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳಿಕೊಳ್ಳುವುದು ಉಚಿತವಲ್ಲ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲೇ ಮಾಸ್ಕ್ ಧರಿಸದವರಿಗೆ ಹಾಕಲಾಗುವ ದಂಡ ಏರಿಕೆ ಮಾಡಲಾಗಿರುವ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಜನರ ಸುರಕ್ಷಿತ ದೃಷ್ಟಿಯಿಂದ ಕೈಗೊಳ್ಳಲಾಗಿರುವ ಕ್ರಮ. ಕೊರೊನಾ ಸೋಂಕು ನಾವು ದೀರ್ಘ ಕಾಲ ಎದುರಿಸಬೇಕಾಗುತ್ತದೆ. ನಾವು ಈ ಸಂದರ್ಭದಲ್ಲಿ ವೈರಸ್ ನಡುವೆಯೇ ಜೀವನ ಸಾಗಿಸಬೇಕು. ಮಾಸ್ಕ್ ಧರಿಸುವುದು ಕೊರೊನಾ ಸೋಂಕಿಗೆ ರಾಮಬಾಣ. ನಾನು ಸೋಂಕಿತನಾಗಿದ್ದೆ. ಹಾಗಾಗಿ ಜನರಿಗೆ ಈ ಸಲಹೆ ನೀಡುತ್ತೇನೆ. ಜನರು ಯಾವುದೇ ಕಾರಣಕ್ಕೂ ಈ ವಿಚಾರವನ್ನು ಅಸಡ್ಡೆಯಿಂದ ಕಾಣಬೇಡಿ. ನಾನು ಅನುಭವಿಸಿದ್ದು ನೀವ್ಯಾರು ಅನುಭವಿಸಬಾರದು ಎಂದು ಹೇಳಿದ್ದಾರೆ.