ನವದೆಹಲಿ, ಅ. 01 (DaijiworldNews/MB) : ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಹತ್ರಸ್ ಜಿಲ್ಲೆಯಾದ್ಯಂತ ಅಕ್ಟೋಬರ್ 31ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಪಿ.ಕೆ.ಲಕ್ಷಕಾರ್ ಗುರುವಾರ ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲೆಯ ಗಡಿಭಾಗಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ನಡುವೆ ಯುವತಿಯ ಊರಿನತ್ತ ತೆರಳಿದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕೊರೊನಾದ ನಡುವೆಯೂ ಅಲ್ಲಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಈ ಯುವತಿಯ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕುಟುಂಬದವರಿಗೆ ಮಾಡಲು ಅವಕಾಶ ನೀಡದೆ ರಾತ್ರೋರಾತ್ರಿ ಪೊಲೀಸರು ಅಂತ್ಯ ಸಂಸ್ಕಾರ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಹತ್ರಸ್ ಜಿಲ್ಲೆಯಾದ್ಯಂತ ಅಕ್ಟೋಬರ್ 31ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಏತನ್ಮಧ್ಯೆ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿರುವ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಹತ್ರಸ್ ಜಿಲ್ಲೆಯತ್ತ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತೆರಳಿದ್ದು, ರಾಹುಲ್ ಮತ್ತು ಪ್ರಿಯಾಂಕಾ ಅವರಿದ್ದ ವಾಹನವು ಗಡಿಯನ್ನು ದಾಟಿದ ವೇಳೆ ಹತ್ರಸ್ನಿಂದ ಸುಮಾರು 142 ಕಿ.ಮೀ. ದೂರದಲ್ಲಿದ್ದ ಗ್ರೇಟರ್ ನೋಯ್ಡಾದಲ್ಲಿ ರಾಹುಲ್ - ಪ್ರಿಯಾಂಕಾ ಅವರ ಬೆಂಗಾವಲು ವಾಹನವನ್ನು ತಡೆಯಲಾಗಿದ್ದು ರಾಹುಲ್, ಪ್ರಿಯಾಂಕಾ ವಾಹನದಿಂದ ಕೆಳಗಿಳಿದು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹತ್ರಸ್ ಜಿಲ್ಲೆಯತ್ತ ಸಾಗಿದ್ದು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ ಅವರು, ''ಪೊಲೀಸರು ನನ್ನನ್ನು ತಳ್ಳಿದರು, ಲಾಠಿಚಾರ್ಜ್ ಮಾಡಿ ನನ್ನನ್ನು ನೆಲಕ್ಕೆ ದೂಡಿದರು. ನಾನು ಕೇಳಲು ಬಯಸುತ್ತೇನೆ, ಮೋದಿ ಜಿ ಮಾತ್ರ ಈ ದೇಶದಲ್ಲಿ ನಡೆಯಲು ಸಾಧ್ಯವೇ? ಸಾಮಾನ್ಯ ವ್ಯಕ್ತಿ ನಡೆಯಲು ಸಾಧ್ಯವಿಲ್ಲವೇ?'' ಎಂದು ಪ್ರಶ್ನಿಸಿದ್ದಾರೆ. ''ನಮ್ಮ ವಾಹನವನ್ನು ನಿಲ್ಲಿಸಲಾಯಿತು, ಆದ್ದರಿಂದ ನಾವು ನಡೆಯಲು ಪ್ರಾರಂಭಿಸಿದೆವು'' ಎಂದು ತಿಳಿಸಿದ್ದಾರೆ.