ಮೈಸೂರು, ಅ. 01 (DaijiworldNews/MB) : ಕೊರೊನಾ ಸೋಂಕು ಪ್ರರಕಣಗಳು ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸುವುದರ ವಿರುದ್ಧ ಸರ್ಕಾರ ಸ್ಪಷ್ಟ ಸೂಚನೆಗಳನ್ನು ನೀಡಿದ್ದರೂ ಸಹ ಜಿಲ್ಲೆಯ ಪೆರಿಯಪಟ್ಟಣದಲ್ಲಿರುವ ಆದಿಚಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಕ್ಲಾಸ್ ರೂಂ ಗಳ ಒಳಗಡೆ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತಿರುವುದು ಕಂಡುಬಂದಿದೆ.
ಕಳೆದ 15 ದಿನಗಳಿಂದ ಶಾಲೆಯ ಕ್ಲಾಸ್ ರೂಂನ ಒಳಗೆ ತರಗತಿಗಳನ್ನು ನಡೆಸಲಾಗುತ್ತಿದ್ದು ಪ್ರತಿ ತರಗತಿಯಲ್ಲೂ 40 ರಿಂದ 50 ವಿದ್ಯಾರ್ಥಿಗಳು ಇದ್ದಾರೆ.
ಪ್ರಸ್ತುತ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಬಾರದು ಎಂಬ ನಿರ್ದೇಶನಕ್ಕೆ ವಿರುದ್ದವಾಗಿ ಶಾಲೆ ತೆರೆದು ಸಂಸ್ಥೆಯು ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂದು ಪೆರಿಯಪಟ್ಟಣದ ತಹಶೀಲ್ದಾರ ಬಸವರಾಜು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು ಜೆ ಆರ್ ಗೀತಾ ಅವರು, ಪಿಯು ವಿದ್ಯಾರ್ಥಿಗಳಿಗೆ ತರಗತಿಗಳ ಒಳಗೆ ತರಗತಿಗಳನ್ನು ನಡೆಸಲು ಅನುಮತಿ ಇಲ್ಲ. ಆನ್ಲೈನ್ ತರಗತಿಗಳಿಗೆ ಮಾತ್ರ ಅನುಮತಿ ಇದೆ. ಪೆರಿಯಪಟ್ಟಣದಲ್ಲಿ ತರಗತಿಗಳನ್ನು ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ತರಗತಿಗಳನ್ನು ನಿಜವಾಗಿ ನಡೆಸಿದರೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು.