ಶ್ರೀನಗರ, ಅ. 01 (DaijiworldNews/MB) : ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನೌಗಮ್ ವಲಯದ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಗುರುವಾರ ಬೆಳಿಗ್ಗೆ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
"ಕುಪ್ವಾರಾದ ನೌಗಮ್ ಸೆಕ್ಟರ್ನಲ್ಲಿ ಇಂದು ಬೆಳಿಗ್ಗೆ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಯೋಧರು ಸಾವನ್ನಪ್ಪಿದರೆ, ನಾಲ್ವರ ಯೋಧರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನೆಯು ಮಾಹಿತಿ ನೀಡಿದೆ.
ಇದಕ್ಕೂ ಮುನ್ನ, ಬುಧವಾರ ಕೃಷ್ಣಾ ಘಾಟಿ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ಪಡೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಭಾರತೀಯ ಯೋಧ ಹುತಾತ್ಮರಾಗಿದ್ದರು.
ಕಾಶ್ಮೀರ ಕಣಿವೆಯ ಕುಪ್ವಾರಾ ಜಿಲ್ಲೆಯಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಮತ್ತು ಜಮ್ಮುವಿನ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳ ಪಿರ್ ಪಾಂಚಲ್ನಲ್ಲಿ ಹಲವು ದಿನಗಳಿಂದ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ.
ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ನಡೆಸುತ್ತಿರುವ ಎಲ್ಲಾ ಆಕ್ರಮಣಕಾರಿ ಕೃತ್ಯಗಳಿಗೆ ನಮ್ಮ ಸೈನ್ಯವು ಸೂಕ್ತ ಪ್ರತಿಕ್ರಿಯೆ ನೀಡುತ್ತಿದೆ ಎಂದು ಸೇನೆ ಹೇಳಿದೆ.