ಜೈಪುರ, ಅ. 01 (DaijiworldNews/MB) : ರಾಜಸ್ಥಾನದ ಬಾರಾನ್ ಜಿಲ್ಲೆಯಲ್ಲಿ ನಡೆದ ಘಟನಯಲ್ಲಿ ಅತ್ಯಾಚಾರವಾಗಿಲ್ಲ, ಉತ್ತರಪ್ರದೇಶದ ಹತ್ರಾಸ್ನ ಸಾಮೂಹಿಕ ಅತ್ಯಾಚಾರಕ್ಕೂ ಈ ಘಟನೆಗೂ ಯಾವುದೇ ಹೋಲಿಕೆ ಮಾಡುವುದು ಸರಿಯಲ್ಲ, ಈ ಹೋಲಿಕೆಗಳು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸೆಪ್ಟೆಂಬರ್ 19ರಂದು ಸೋದರಿಯರಾದ ಇಬ್ಬರು ಬಾಲಕಿಯರು ಬಾರಾನ್ ಜಿಲ್ಲೆಯಿಂದ ನಾಪತ್ತೆಯಾಗಿದ್ದರು. ಸೆಪ್ಟೆಂಬರ್ 22ರಂದು ಅವರನ್ನು ಕೋಟಾದಲ್ಲಿ ಪತ್ತೆ ಮಾಡಲಾಯಿತು ಬಾಲಕಿಯರ ಹೇಳಿಕೆ ಪಡೆದು ಪೋಷಕರಿಗೆ ಒಪ್ಪಿಸಲಾಯಿತು. ವೈದ್ಯಕೀಯ ವರದಿಗಳಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿಲ್ಲ. ಈ ಬಾಲಕಿಯರು ತಮ್ಮ ಇಚ್ಛೆಯಲ್ಲಿ ಬಾಲಕರೊಂದಿಗೆ ಹೋಗಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಬಾರಾನ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಅತ್ಯಾಚಾರ ನಡೆದಿಲ್ಲ. ಬಾಲಕಿಯರು ಅಪ್ರಾಪ್ತ ಬಾಲಕರೊಂದಿಗೆ ತಮ್ಮ ಇಚ್ಚೆಯಲ್ಲಿ ಹೋಗಿದ್ದು ಬಾಲಕಿಯರ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಅತ್ಯಾಚಾರ ನಡೆದಿಲ್ಲ. ತನಿಖೆ ಮುಂದುವರಿದಿದೆ. ಆದರೆ ಈ ಪ್ರಕರಣವನ್ನು ಉತ್ತರಪ್ರದೇಶದ ಹತ್ರಾಸ್ನ ಸಾಮೂಹಿಕ ಅತ್ಯಾಚಾರಕ್ಕೆ ಹೋಲಿಕೆ ಮಾಡುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಏತನ್ಮಧ್ಯೆ ರಾಜಸ್ತಾನದಲ್ಲಿ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ಬಿಜೆಪಿ ವಕ್ತಾರ ರಾಮ್ಲಾಲ್ ಶರ್ಮ ಅವರು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.