ನೋಯ್ಡಾ, ಅ. 02 (DaijiworldNews/MB) : ಗುರುವಾರ ಹತ್ರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಕಾಲ್ನಡಿಗೆಯಲ್ಲೇ ಹೋದ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸುಮಾರು 200 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಪೋಲೀಸರು, ಎಫ್ಐಆರ್ ಅನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 188(ಸಾರ್ವಜನಿಕ ಸೇವಕರಾಗಿ ಸರಿಯಾದ ಆದೇಶ ಪಾಲನೆ ಮಾಡದಿರುವುದು), 269 (ಕಾನೂನುಬಾಹಿರವಾಗಿ ಅಥವಾ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿಯಾದ ಯಾವುದೇ ರೋಗದ ಸೋಂಕನ್ನು ಹರಡುವುದು), 270 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಾಧ್ಯತೆ) ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ದಾಖಲಿಸಲಾಗಿದೆ. ಪಕ್ಷದ ಕೆಲವು ಕಾರ್ಯಕರ್ತರು ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ್ದು ಮಹಿಳಾ ಸಿಬ್ಬಂದಿಗಳಿಗೆ ಗಾಯವಾಗಿದೆ. ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಓರ್ವ ಲೇಡಿ ಸಬ್ ಇನ್ಸ್ಪೆಕ್ಟರ್ನ ಸಮವಸ್ತ್ರ ಹರಿದುಹೋಗಿದೆ ಎಂದು ತಿಳಿಸಿದ್ದಾರೆ.
ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಹೊರಟ ರಾಹುಲ್ ಹಾಗೂ ಪ್ರಿಯಾಂಕಾ ಅವರ ಬೆಂಗಾವಲು ಕಾರನ್ನು ಉತ್ತರ ಪ್ರದೇಶ ಪೊಲೀಸರು ಗ್ರೇಟರ್ ನೋಯ್ಡಾದಲ್ಲಿ ತಡೆದಿದ್ದು ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ರಾಹುಲ್, ಪ್ರಿಯಾಂಕಾ ಕಾಲ್ನಡಿಗೆ ಮೂಲಕ ಹೊರಟಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಬಂಧನ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವು ಮುಖಂಡರು ಬಂಧನವನ್ನು ಖಂಡಿಸಿದ್ದಾರೆ.
ಇನ್ನು ಹತ್ರಸ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ದಸಾಮೂಹಿಕ ಅತ್ಯಾಚಾರ ನಡೆಸಿದ ದುರುಳರು ಆಕೆಯ ನಾಲಿಗೆ ತುಂಡಾಗುವಂತೆ ಹಾಗೂ ಮೂಳೆಗಳು ಮುರಿಯುವಂತೆ ಹಿಂಸಾಚಾರ ನೀಡಿದ್ದರು. ಸಂತ್ರಸ್ತೆಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು ಮೃತ ದೇಹದ ಅಂತಿಮ ಸಂಸ್ಕಾರಕ್ಕೆ ಕುಟುಂಬಸ್ಥರಿಗೆ ಅವಕಾಸ ನೀಡದ ಪೊಲೀಸರು ರಾತ್ರೋರಾತ್ರಿ ಸಂತ್ರಸ್ತೆಯ ಮೃತದೇಹದ ಅಂತ್ಯಸಂಸ್ಕಾರ ಮಾಡಿದ್ದರು. ಅಷ್ಟೇ ಅಲ್ಲದೆ ಸಂತ್ರಸ್ತೆಯ ಕುಟುಂಬಸ್ಥರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ. ಈ ವಿಚಾರವಾಗಿ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.