ನವದೆಹಲಿ, ಅ. 02 (DaijiworldNews/MB) : ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್ ಘಾಟ್ನಲ್ಲಿ ನಮನ ಸಲ್ಲಿಸಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆ ಟ್ವೀಟ್ ಮಾಡಿ ಗಾಂಧೀಜಿ ಸ್ಮರಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಗಾಂಧಿ ಜಯಂತಿಯಮದು ನಾವು ಪ್ರೀತಿಯ ಬಾಪುವಿಗೆ ನಮಸ್ಕರಿಸುತ್ತೇವೆ. ಅವರ ಜೀವನ ಮತ್ತು ಉದಾತ್ತ ಚಿಂತನೆಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ರಚಿಸಲು ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡಲಿ ಎಂದು ಹೇಳಿದ್ದಾರೆ.
ಇನ್ನು ಅಕ್ಟೋಬರ್ 2ರಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು ಪ್ರಧಾನಿ ಮೋದಿಯವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಕೂಡಾ ಸ್ಮರಿಸಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿನಯವಂತ ಮತ್ತು ದೃಢ ವ್ಯಕ್ತಿಯಾಗಿದ್ದರು. ಅವರು ಸರಳತೆಯ ಸ್ಪಷ್ಟ ಉದಾಹರಣೆಯಂತಿದ್ದು ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದರು ಎಂದು ಹೇಳಿದ್ದಾರೆ.
ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಗಾಂಧಿ ಜಯಂತಿಯಂದು ಬಾಪು ಅವರ ಆದರ್ಶ, ಜೀವನವನ್ನು ಸ್ಮರಿಸಿದ್ದಾರೆ.