ಗುವಾಹತಿ, ಅ.02 (DaijiworldNews/HR) : ಅಸ್ಸಾಂನ ಗುಡ್ಡಗಾಡು ಗ್ರಾಮದಲ್ಲಿ ಮಾಟ ಮಂತ್ರ ಮಾಡುತ್ತಿದ್ದ ಶಂಕೆಯಲ್ಲಿ ಸ್ಥಳೀಯ ಗ್ರಾಮಸ್ಥರು ಕಂಗಾರೂ ಕೋರ್ಟ್ ನಿರ್ಣಯದಂತೆ ಇಬ್ಬರನ್ನು ನಿರ್ದಯವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಪೊಲೀಸರಿಗೆ ದೂರು ನೀಡಲಾಗಿದೆ. ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಇಬ್ಬರ ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ಈ ಗ್ರಾಮದ ಮಹಿಳೆಯೊಬ್ಬರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಗುವಾಹತಿಗೆ ಕರೆದೊಯ್ಯಲಾಗಿತ್ತು. ಈ ಮಹಿಳೆಯ ಅಂತ್ಯ ಸಂಸ್ಕಾರದ ವೇಳೆ ಗ್ರಾಮದ 50 ವರ್ಷದ ವಿಧವೆ ರಮಾವತಿ ಹಲೂವಾ ಎಂಬಾಕೆ ಕೂಡಾ ವಿಚಿತ್ರವಾಗಿ ವರ್ತಿಸತೊಡಗಿದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಗುಡ್ಡಗಾಡು ಗ್ರಾಮದಲ್ಲಿ ಬಹುತೇಕ ಆದಿವಾಸಿ ಸಮುದಾಯದವರಿದ್ದು, ರಮಾವತಿ ಮಾಟ ಮಂತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿತ್ತು. ಕಂಗಾರೂ ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿ, ಗ್ರಾಮದಲ್ಲಿ ಸಂಭವಿಸುವ ಎಲ್ಲ ಅನಿಷ್ಟಗಳಿಗೆ ಮಹಿಳೆ ಕಾರಣ ಎಂದು ತಕ್ಷಣ ಗ್ರಾಮಸ್ಥರು ಆಕೆಯ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿತು. ಈ ಸಂದರ್ಭ ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ 28 ವರ್ಷದ ಸುಶಿಕ್ಷಿತ ಯುವಕ ವಿಜಯ್ ಗೌರ್ ಮೇಲೂ ಹಲ್ಲೆ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.