ಬೆಂಗಳೂರು, ಅ. 02 (DaijiworldNews/MB) : ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗುವ ಸಾಧ್ಯತೆಯಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ, ಜೆಡಿಎಸ್, ಬಿಜೆಪಿ ಈ ಉಪಚುನಾವಣೆಯಲ್ಲಿ ಜೊತೆಯಾಗುವ ಸಾಧ್ಯತೆಗಳು ಕಂಡು ಬರುತ್ತಿದೆ.
ಈ ಉಪಚುನಾವಣೆಗಳು ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದರೂ, ಶತ್ರುಗಳೇ ನಮ್ಮ ಮಿತ್ರರು ಎಂಬಂತೆ ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡುವ ಸಾಧ್ಯತೆಗಳು ಕಂಡು ಬಂದಿದೆ.
ಬಿಜೆಪಿ ನಾಯಕರುಗಳು ಜೆಡಿಎಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದು ಶಿರಾದಲ್ಲಿ ಜೆಡಿಎಸ್ ಜಯಗಳಿಸಲು ಹಾಗೂ ಆರ್ಆರ್ನಗರದಲ್ಲಿ ಬಿಜೆಪಿಯ ಗೆಲುವಿಗಾಗಿ ಈ ಎರಡು ಪಕ್ಷದ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶಿರಾದಲ್ಲಿ ಬಿಜೆಪಿಗೆ ಹೆಚ್ಚಿನ ಹಿಡಿತವಿಲ್ಲದ ಕಾರಣ ಇಲ್ಲಿ ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೇ ಆರ್ಆರ್ ನಗರದಲ್ಲಿ ಸುಲಭವಾಗಿ ತಮ್ಮ ತೆಕ್ಕೆಗೆ ಪಡೆಯಬಹುದು ಎಂದು ಬಿಜೆಪಿ ನಾಯಕರು ಲೆಕ್ಕಚಾರ ಹಾಕುತ್ತಿದ್ದಾರೆ.
ಈ ನಡುವೆ ಜೆಡಿಎಸ್ನ ಹನುಮಂತರಾಯಪ್ಪ ಅವರು ತಮ್ಮ ಮಗಳು ಕುಸುಮಾ ಡಿ ಕೆ ರವಿ ಅವರನ್ನು ಆರ್ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ಅವರು ಜೆಡಿಎಸ್ ಬೆಂಬಲವನ್ನೂ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಾರ್ಯತಂತ್ರದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲ್ಯಾನ್ ಇದೆ ಎಂದು ತಿಳಿದುಬಂದಿದೆ.
ಆರ್ಆರ್ ನಗರದಲ್ಲಿ ಮುನಿರತ್ನರನ್ನು ಸೋಲಿಸುವುದಾಗಿ ಡಿ ಕೆ ಬ್ರದರ್ಸ್ ಪ್ರತಿಜ್ಞೆ ಮಾಡಿದ್ದಾರೆ. ಶಿರಾದಲ್ಲಿ ಗೆಲುವು ಜೆಡಿಸ್ನ ಪ್ರತಿಷ್ಠೆಯ ವಿಷಯವಾಗಿದ್ದರೆ ಆರ್ಆರ್ ನಗರದಲ್ಲಿ ಜಯ ಗಳಿಸುವುದು ಬಿಜೆಪಿಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಈವೆರಡೂ ಪಕ್ಷಗಳ ಏಕೈಕ ಗುರಿ ಕಾಂಗ್ರೆಸ್ ಅನ್ನು ಕೆಳಗಿಳಿಸುವುದಾಗಿದೆ. ಅದೇ ಕಾರಣಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಆರ್ ಆರ್ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಲ್ಕು ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಮಾಜಿ ಶಾಸಕ ಬಾಲಕೃಷ್ಣ, ರಕ್ಷಾ ರಾಮಯ್ಯ ಮತ್ತು ಪ್ರಿಯಾ ಕೃಷ್ಣ ಅವರ ಹೆಸರನ್ನು ಕೂಡಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಏತನ್ಮಧ್ಯೆ, ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಕೂಡ ಆದಿಚುಂಚನಗಿರಿ ಸ್ವಾಮೀಜಿಯನ್ನು ಭೇಟಿಯಾಗಿ ಅವರ ಆಶೀರ್ವಾದ ಕೋರಿದ್ದಾರೆ. ಅವರು ಕಾಂಗ್ರೆಸ್ ಟಿಕೆಟ್ನ ಆಕಾಂಕ್ಷಿ ಕೂಡ ಎಂದು ಹೇಳಲಾಗಿದೆ.
ಆರ್ ಆರ್ ನಗರ ಟಿಕೆಟ್ ಸಮಸ್ಯೆಯನ್ನು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಿ ಕೆ ಸುರೇಶ್ ಅವರು, ಸಭೆಯಲ್ಲಿ ನಾಲ್ಕು ಜನರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.