ಲಕ್ನೋ, ಅ.02 (DaijiworldNews/HR): ಉತ್ತರ ಪ್ರದೇಶದ ಹತ್ರಸ್ ಸಾಮೂಹಿಕ ದಲಿತ ಯುವತಿಯ ಅತ್ಯಾಚಾರ, ಸಾವು ಮತ್ತು ಬಲಾತ್ಕಾರದ ಅಂತ್ಯಸಂಸ್ಕಾರದ ಬೆನ್ನಲ್ಲೇ ಇದೀಗ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಹಲವು ಮಂದಿ ವಕೀಲರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಸರಕಾರವನ್ನು ತಕ್ಷಣ ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಗೆ ಚಿತ್ರಹಿಂಸೆ ನಡೆದಿರುವ ಘಟನೆಯಿಂದ ರಾಷ್ಟ್ರಮಟ್ಟದಲ್ಲಿ ದೇಶದ ಘನತೆಗೆ ಮಸಿ ಬಳಿದಂತಾಗಿದ್ದು, ಇದು ರಾಜ್ಯದ ಪ್ರಗತಿಯನ್ನೂ ಶೂನ್ಯಗೊಳಿಸಲಿದೆ ಎಂದು ವಕೀಲರ ಸಮುದಾಯ ಅಭಿಪ್ರಾಯಪಟ್ಟಿದೆ.
ಇನ್ನು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ಮೂಲಕ ರಾಷ್ಟ್ರಪತಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆ ವೇಳೆ ವಕೀಲರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಮುಖ್ಯಮಂತ್ರಿಯ ಪ್ರತಿಕೃತಿ ದಹನ ನಡೆಸಿದರು. ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದು ಆಪಾದಿಸಿದ್ದಾರೆ.