ಉತ್ತರಪ್ರದೇಶ, ಅ. 02(DaijiworldNews/PY): ಯುಪಿಯಲ್ಲಿ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಭದೋಹಿ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಗುರುವಾರ ಹತ್ಯೆ ಮಾಡಲಾಗಿದ್ದು, ಹೊಲಕ್ಕೆಂದು ಹೋದ ಬಾಲಕಿ ಮನೆಗೆ ಹಿಂದಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಲಕ್ಕೆಂದು ಹೋದ ಬಾಲಕಿ ಇನ್ನು ಬಾರದೇ ಇದ್ದದನ್ನು ಕಂಡು ಆಕೆಯ ಸಹೋದರ ಅವಳನ್ನು ಹುಡುಕುತ್ತಾ ಹೊರಟ ಸಂದರ್ಭ ಆಕೆಯ ಮೃತದೇಹ ಪತ್ತೆಯಾಗಿದೆ.
ಬಾಲಕಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಈ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆಗಿದೆಯೋ ಅಥವಾ ಇಲ್ಲವೋ ಎಂಬು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬರಬೇಕಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಭದೋಹಿ ಜಿಲ್ಲೆಯ ಎಸ್ಪಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ.
ಬಾಲಕಿಯು ಗೋಪಿಗಂಜ್ ಪೊಲೀಸ್ ಠಾಣಾ ಪ್ರದೇಶದ ಚಕ್ರರಾಜಂ ತಿವಾರಿಪುರ ಗ್ರಾಮದ ನಿವಾಸಿ. ಮಗಳನ್ನು ಹತ್ಯೆ ಮಾಡುವ ಮುನ್ನ ಅತ್ಯಾಚಾರ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಬಾಲಕಿಯ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ತಿಳಿಯಲಿದೆ. ಉತ್ತರ ಪ್ರದೇಶದ ಕ್ರೈಮ್ ವಿಭಾಗದ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಘಟನಾ ಸ್ಥಳಕ್ಕೆ ಬಂದು ಸಾಕ್ಷ್ಯಾಧಾರಗಳನ್ನ ಕಲೆಹಾಕುತ್ತಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.
ಹತ್ರಸ್ನಲ್ಲಿ 19 ವರ್ಷದ ದಲಿತ ಯುವತಿಯ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆಯ ಬಳಿಕ ಇಂತಹ ಮತ್ತೊಂದು ಕೃತ್ಯ ನಡೆದಿದೆ.
ಇನ್ನು ಮಂಗಳವಾರದಂದು, 22 ವರ್ಷದ ಬಲರಾಮಪುರ ಜಿಲ್ಲೆಯ ಗೈಸರಿ ಗ್ರಾಮದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಉತ್ತರಪ್ರದೇಶದ ಬುಲಂದರ್ಶಹರ್ ಹಾಗೂ ಅಜಮ್ಗರ್ ಜಿಲ್ಲೆಯಲ್ಲಿ ಗುರುವಾರದಂದು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಆತ್ಯಾಚಾರ ನಡೆದಿದೆ.
ವರದಿಗಳ ಪ್ರಕಾರ, ಅಜಮ್ಗರ್ನ 8 ವರ್ಷದ ಬಾಲಕಿಯ ಮೇಲೆ ಆಕೆಯ ಪಕ್ಕದ ಮನೆಯ 20 ವರ್ಷದ ಯುವಕ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಈ ವಿಚಾರವಾಗಿ ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿ ಡ್ಯಾನಿಶ್ ಎಂಬಾತನನ್ನು ಬಂಧಿಸಿದ್ದೇವೆ. ಈತ ಸಂತ್ರಸ್ತೆಯ ಎದುರು ಮನೆಯಲ್ಲಿ ವಾಸ ಮಾಡುತ್ತಿದ್ದು, ಆಕೆಯ ಮನೆಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.
ಬುಲಂದರ್ಶಹರ್ನಲ್ಲಿ ಅಪ್ರಾಪ್ತೆಯ ಮೇಲೆ ಬುಧವಾರ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಜ್ವಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಬುಲಂದ್ಶಹರ್ ಎಸ್ಎಸ್ಪಿ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.