ಬೆಳಗಾವಿ, 02 (DaijiworldNews/HR): ಉತ್ತರಪ್ರದೇಶದ ಸಿಎಂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದು, ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂತ್ರಸ್ತ ಯುವತಿ ಮನೆಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಪೊಲೀಸರು ಬಿಡಲಿಲ್ಲ. ಈ ದೇಶ ಬಿಜೆಪಿಯ ಆಸ್ತಿಯೂ ಅಲ್ಲ, ಯೋಗಿ ಆದಿತ್ಯನಾಥ್ ಆಸ್ತಿಯೂ ಅಲ್ಲ ಎಂದು ಟೀಕಿಸಿದರು.
ಇನ್ನು ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸರು ರಾಹುಲ್ ಗಾಂಧಿಯವರನ್ನು ತಡೆದಿದ್ದು, ಯೋಗಿ ಆದಿತ್ಯನಾಥ್ ಗೆ ಸಿಎಂ ಆಗಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ನೀಡಲಿ. ಆತ "ಯೋಗಿನೋ ರೋಗಿನೋ" ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಳಿಕ ಇದೇ ಸಂಧರ್ಭದಲ್ಲಿ ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಅಧಿಕಾರ ನಡೆಸಿದ್ದರು ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲ್ ಯಕಶ್ಚಿತ್ ರಾಜಕಾರಣಿ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.