ಲಖನೌ, ಅ. 02(DaijiworldNews/PY): ಉತ್ತರಪ್ರದೇಶ ಸರ್ಕಾರದ ವಿರುದ್ದ ಕಿಡಿಕಾರಿರುವ ನಿರ್ಭಯಾ ಅತ್ಯಾಚಾರ ಪ್ರಕರಣದ ಪರವಾಗಿ ವಾದಿಸಿದ ವಕೀಲೆ ಸೀಮಾ ಕುಶ್ವಾಹ ಅವರು, ಹತ್ರಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸಂತ್ರಸ್ತೆಯ ಕುಟುಂಬದವರು ನನ್ನನ್ನು ಭೇಟಿಯಗುವ ಇಂಗಿತ ವ್ಯಕ್ತಪಡಿಸಿದ್ದು, ತಮ್ಮನ್ನು ಸಂತ್ರಸ್ತೆಯ ಪರವಾಗಿ ವಕೀಲರನ್ನಾಗಿ ನೇಮಕ ಮಾಡುವ ಆಸೆ ವ್ಯಕ್ತಪಡಿಸಿದ್ದರು. ಹಾಗಾಗಿ ನಾನು ಅವರ ಮನೆಗೆ ಹೋಗಲು ಮುಂದಾಗಿದ್ದೆ. ಆದರೆ, ಸಂತ್ರಸ್ತೆಯ ಕುಟುಂಬಸ್ಥರನ್ನುಸ್ಥಳೀಯ ಆಡಳಿತವು ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ ಎಂದಿದ್ದಾರೆ.
ನಾನು ಇಲ್ಲಿಗೆ ಬಂದರೆ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬುದಾಗಿ ಸ್ಥಳೀಯ ಅಡಳಿತ ಹೇಳಿದೆ. ಆದರೆ, ಇದು ಯಾವ ನ್ಯಾಯ? ಸಂತ್ರಸ್ತೆಯ ಕುಟುಂಬವನ್ನು ನಾನು ಭೇಟಿ ಮಾಡಿದರೆ ಕಾನೂನು ಸುವ್ಯಸ್ಥೆಗೆ ಹೇಗೆ ಧಕ್ಕೆ ಉಂಟಾಗುತ್ತದೆ? ಒಬ್ಬ ವ್ಯಕ್ತಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇದು ಕಾನೂನು ಹಾಗೂ ಸುವ್ಯವಸ್ಥೆಗೆ ಹೇಗೆ ಭಂಗ ತರುತ್ತದೆ? ಎಂದು ಕೇಳಿದ್ದಾರೆ.
ಆದರೆ, ನಾನು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡದೇ ಇಲ್ಲಿಂದ ಹೋಗುವುದಿಲ್ಲ. ನನಗೆ ಆಡಳಿತ ಸಹಕಾರ ನೀಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
2012ರಲ್ಲಿ ನಿರ್ಭಯಾ ಪ್ರಕರಣದಲ್ಲಿ ವಾದ ಮಂಡಿಸಿದ್ದ ಸೀಮಾ ಅವರು, ನಾಲ್ವರು ಅಪರಾಧಿಗಳಾದ ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಹಾಗೂ ಮುಖೇಶ್ ಸಿಂಗ್ ಅವರನ್ನು ಗಲ್ಲಿಗೇರಿಸುವಲ್ಲಿ ನೆರವಾಗಿದ್ದರು.