ಜೈಪುರ, 02 (DaijiworldNews/HR): ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ರಾಜಸ್ಥಾನದ ಬಾರನ್ ಜಿಲ್ಲೆಗೆ ಏಕೆ ಭೇಟಿ ನೀಡಲಿಲ್ಲವೆಂದು ಕೇಳುವ ಬದಲು ಬಿಜೆಪಿಯ ಹಿರಿಯ ನಾಯಕರೇ ಅಲ್ಲಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಉತ್ತರಪ್ರದೇಶದ ಹತ್ರಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬದವರನ್ನು ಭೇಟಿ ಮಾಡಲು ರಾಹುಲ್ ಮತ್ತು ಪ್ರಿಯಾಂಕ ಅಲ್ಲಿಗೆ ತೆರಳುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದರು.
ಈ ಕುರಿತು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ಮುಖ್ಯ. ಉತ್ತರಪ್ರದೇಶ ಸರ್ಕಾರ ಕೆಲವು ಅಂಶಗಳು ಜನರಿಗೆ ಗೊತ್ತಾಗದಂತೆ ಮಾಡಲು ಹೊರಟಿದೆ. ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಬಂಧಿಸುವ ಮೂಲಕ ಇದು ಸಾಬೀತಾಗಿದೆ. ಅಮಿತ್ಷಾ ಅಥವಾ ಧರ್ಮೇಂದ್ರ ಪ್ರಧಾನ್ ಅವರಂತಹ ನಾಯಕರು ಬಾರನ್ ಜಿಲ್ಲೆಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.
ಇನ್ನು ಘಟನೆಗಳು ಎಲ್ಲಾದರೂ ನಡೆಯಬಹುದು. ಆದರೆ ಮುಖ್ಯವಾದುದು ಸೂಕ್ತ ಕ್ರಮ ಕೈಗೊಳ್ಳುವುದು. ಕ್ರಮ ಕೈಗೊಳ್ಳದೇ ಇರುವುದಕ್ಕೆ ಹತ್ರಸ್ ನಿದರ್ಶನ ಎಂದು ಹೇಳಿದ್ದಾರೆ.