ನವದೆಹಲಿ, ಅ. 02 (DaijiworldNews/MB) : ಕೊರೊನಾ ಬಿಕ್ಕಟ್ಟಿನ ನಡುವೆಯೂ ಭಾರತ ಸರ್ಕಾರ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇನ್ನು ಕೊರೊನೋತ್ತರವೂ ಸರ್ಕಾರ ಮಹಿಳೆಯರ ರಕ್ಷಣೆಗೆ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಗವಾಗಿ ನಡೆಯುತ್ತಿರುವ ನಾಲ್ಕನೇ ವಿಶ್ವ ಮಹಿಳಾ ವಿಚಾರ ಸಂಕಿರಣದ 25ನೇ ವಾರ್ಷಿಕೋತ್ಸವದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್(ವರ್ಚುವಲ್)ನಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಲಿಂಗ ಸಾಮಾನತೆ, ಮಹಿಳಾ ಸಬಲೀಕರಣ, ಮಹಿಳೆಯರ ರಕ್ಷಣೆ ವಿಚಾರವಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೇಶದಲ್ಲಿ ಸೋಂಕು ಕಂಡು ಬಂದ ಬಳಿಕ ಮಹಿಳೆಯರ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದೇ ಸೂರಿನಡಿ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರಗಳನ್ನು ತೆರೆದು ಮಹಿಳೆಯರಿಗೆ ವೈದ್ಯಕೀಯ, ಮಾನಸಿಕ ಆರೋಗ್ಯ, ಕಾನೂನು, ಪೊಲೀಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ನಂತರವೂ ಕೂಡಾ ಸರ್ಕಾರವು ಗರ್ಭಿಣಿಯರಿಗೆ, ಹಾಲುಣಿಸುವ ಮಹಿಳೆಯರಿಗೆ, ಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆ ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.