ಅಲಹಾಬಾದ್, 02 (DaijiworldNews/HR): ಉತ್ತರ ಪ್ರದೇಶದ ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಪೊಲೀಸರು ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ರಾತ್ರೋರಾತ್ರಿ ನಡೆಸಿರುವ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠ ಈ ಪ್ರಕರಣ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಇನ್ನು ಅ.12ರಂದು ನಡೆಯಲಿರುವ ವಿಚಾರಣೆಗೆ ಖುದ್ದು ಹಾಜರಾಗುವಂತೆ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಗೃಹ ಕಾರ್ಯದರ್ಶಿ, ಡಿಜಿಪಿ, ಎಡಿಜಿಪಿ , ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಹತ್ರಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಈ ಪ್ರಕರಣದ ಕುರಿತು ವಿವರಣೆ ಹಾಗೂ ತನಿಖೆಯ ಸ್ಥಿತಿಗತಿಗಳನ್ನು ತಿಳಿಸಬೇಕು ಎಂದು ಜಸ್ಟಿಸ್ ಜಸ್ ಪ್ರೀತ್ ಸಿಂಗ್ ಹಾಗೂ ಜಸ್ಟಿಸ್ ರಾಜನ್ ರಾಯ್ ಅವರನ್ನೊಳಗೊಂಡ ಪೀಠ ಹೇಳಿದೆ.
ಇನ್ನು ಸಂತ್ರಸ್ತೆಯ ಕುಟುಂಬಕ್ಕೂ ಸಮನ್ಸ್ ಕಳುಹಿಸಿರುವ ನ್ಯಾಯಾಲಯ ಅವರ ವಿವರಣೆಯನ್ನೂ ಪಡೆಯಲಿದೆ ಹಾಗೂ ಕುಟುಂಬದ ಮೇಲೆ ಯಾರೂ ಯಾವುದೇ ರೀತಿಯಲ್ಲಿ ಒತ್ತಡ ಹೇರದಂತೆ ರಾಜ್ಯದ ಆಡಳಿತ ನೋಡಿಕೊಳ್ಳಬೇಕೆಂದೂ ನ್ಯಾಯಾಲಯ ತಿಳಿಸಿದೆ.