ಬೆಂಗಳೂರು, ಅ. 02(DaijiworldNews/PY): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳಿಂದ ಸಂಗ್ರಹಿಸಿದ್ದ ತಲೆ ಕೂದಲು ಮಾದರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಾಪಾಸ್ಸಾಗಿಸಿದ್ದಾರೆ.
ಬಂಧಿತ ಆರೋಪಿಗಳು ಮಾದಕ ವ್ಯಸನಿಗಳು ಎನ್ನುವ ಅನುಮಾನವಿದ್ದು, ಈ ವಿಚಾರವನ್ನು ದೃಢಪಡಿಸಿಕೊಳ್ಳುವ ಸಲುವಾಗಿ ನ್ಯಾಯಾಲಯದ ಅನುಮತಿಯ ಮೇರೆಗೆ ತಲೆ ಕೂದಲು ಸೇರಿದಂತೆ ಮೂತ್ರ ಹಾಗೂ ರಕ್ತ ಪರೀಕ್ಷೆಗೆ ಮಾದರಿಯನ್ನು ಸಂಗ್ರಹ ಮಾಡಲಾಗಿದ್ದು, ತಲೆ ಕೂದಲು ಸಂಗ್ರಹಿಸಿದ ವಿಧಾನ ವೈಜ್ಞಾನಿಕವಾಗಿಲ್ಲ ಎಂದು ಹೇಳಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಅದನ್ನು ವಾಪಾಸ್ಸು ಕಳುಹಿಸಿದ್ದಾರೆ.
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಇತರ ಆರೋಪಿಗಳ ಮಾದರಿಯನ್ನು ಸಂಗ್ರಹಿಸಿ ಅದನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ಮುಖಾಂತರ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನೀಡಲಾಗಿತ್ತು.
ಸಣ್ಣದಾದ ತಾಂತ್ರಿಕ ಕಾರಣದಿಂದ ಹೀಗಾಗಿದೆ. ರಕ್ತ ಹಾಗೂ ಮೂತ್ರದ ಮಾದರಿ ಪ್ರಯೋಗಾಲಯದಲ್ಲಿ ಇವೆ. ತಲೆ ಕೂದಲು ಪರೀಕ್ಷೆಯನ್ನು ಇದೇ ಮೊದಲ ಬಾರಿಗೆ ಮಾಡಿಸಲಾಗಿದೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.