ಬೆಂಗಳೂರು, 02 (DaijiworldNews/HR): ಕೃಷಿ ಮಸೂದೆ ದೇಶದ ರೈತರ ಹಿತದೃಷಿಯಿಂದ ಕೈಗೊಳ್ಳಲಾಗಿದ್ದು, ರೈತರ ಪರವಾಗಿದೆ, ಕಾಂಗ್ರೆಸ್ ನ ಅಪಪ್ರಚಾರಕ್ಕೆ ಭಯಪಡುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಈ ಕುರಿತು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ವಿಧೇಯಕ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ವಿಧೇಯಕ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ವಿಧೇಯಕಗಳು ರೈತಪರವಾಗಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ಜು ರೈತರ ಹಿತದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಸ್ವಾವಲಂಬಿ, ಸ್ವಾಭಿಮಾನ ಹಾಗೂ ಸದೃಢ ಬದುಕು ಕಟ್ಟಿಕೊಡುವಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಅಚಲವಾಗಿದ್ದು, ಯಾವುದೇ ಪ್ರತಿಭಟನೆ, ಬೆದರಿಕೆಗೆ ಅಂಜುವುದಿಲ್ಲ ಎಂದರು.
ಕಾಂಗ್ರೆಸ್ ಮತ್ತಿತ್ತರ ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದು, ಮಸೂದೆಗಳಲ್ಲಿ ಟೀಕಿಸಲು ವಿಪಕ್ಷ ನಾಯಕರಿಗೆ ಯಾವುದೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹೀಗಾಗಿ ಕಾಯಿದೆಗಳ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.