ಲಖನೌ, ಅ. 02 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದಿರುವ ಅಮಾನುಷ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು ಈ ನಡುವೆ ಮೃತ ಯುವತಿಯ ಕುಟುಂಬಸ್ಥರನ್ನು ಗೃಹ ಬಂಧನದಲ್ಲಿರಿಸಿ ಅವರು ಮಾಧ್ಯಮದೊಂದಿಗೆ ಮಾತನಾಡದಂತೆ ತಡೆಹಿಡಿಯಲಾಗಿದೆ ಎಂದು ಆರೋಪಿಸಲಾಗಿದೆ.
ಮೃತ ಯುವಕನ ಕುಟುಂಬದ ಅಪ್ರಾಪ್ತ ಸದಸ್ಯನೋರ್ವ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳ ಜೊತೆಗೆ ಮಾತನಾಡಲು ಜಿಲ್ಲಾಡಳಿತ ಬಿಡುತ್ತಿಲ್ಲ. ನಾನು ತಪ್ಪಿಸಿಕೊಂಡು ಗದ್ದೆಗಳನ್ನೆಲ್ಲಾ ದಾಟಿ ಇಲ್ಲಿಗೆ ಬಂದಿದ್ದೇನೆ. ನಮ್ಮೆಲ್ಲರ ಮೊಬೈಲ್ ಫೋನ್ಗಳನ್ನು ಸ್ವೀಚ್ ಆಫ್ ಮಾಡಿ ಕಿತ್ತುಕೊಳ್ಳಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಕುಟುಂಬ ಸದಸ್ಯರು ಗ್ರಾಮದ ಪ್ರವೇಶದ್ವಾರದ ಹೊರಗೆ ಕಾಯುವ ಮಾಧ್ಯಮಗಳ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿದ್ದು ನಾನು ಗದ್ದೆಯನ್ನೆಲ್ಲಾ ದಾಟಿ ತಪ್ಪಿಸಿಕೊಂಡು ಬಂದಿದ್ದೇನೆ. ಪೊಲೀಸರು ನಮ್ಮ ಕುಟುಂಬಸ್ಥರನ್ನು ಹೊರಗೆ ಬರಲು ಬಿಡುತ್ತಿಲ್ಲ. ಮಾಧ್ಯಮದೊಂದಿಗೆ ಮಾತನಾಡಲು ಬಿಡುತ್ತಿಲ್ಲ. ಬೆದರಿಕೆ ಹಾಕಲಾಗುತ್ತಿದೆ. ಕುಟುಂಬದ ಓರ್ವ ವ್ಯಕ್ತಿಗೆ ಹೊಡೆಯಲಾಗಿದ್ದು ಅವರು ಅಸ್ವಸ್ಥರಾಗಿದ್ದಾರೆ. ನಮ್ಮನ್ನೆಲ್ಲಾ ಮನೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾನೆ.
ಇನ್ನು ಅಪ್ತಾಪ್ತ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಆಗಮಿಸಿದ್ದು ಕೂಡಲೇ ಬಾಲಕ ಅಲ್ಲಿಂದ ಭಯದಿಂದ ಓಡಿಹೋಗಿದ್ದಾನೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಮಾಧ್ಯಮ ಪ್ರಶ್ನಿಸಿದ್ದಾಗ ಯಾವುದೇ ಉತ್ತರ ನೀಡದೆ ನಾನು ಏನು ಹೇಳುವುದಿಲ್ಲ ಎಂದು ಹೇಳಿದ್ದಾರೆ.
ಹತ್ರಸ್ ಸಾಮೂಹಿಕ ಅತ್ಯಾಚಾರದ ಬಳಿಕ ಆಸ್ಪತ್ರೆಯಲ್ಲಿ ಮೃತಮಟ್ಟ ಸಂತ್ರಸ್ಥೆಯ ಮೃತ ದೇಹದ ಅಂತ್ಯಕ್ರಿಯೆಯನ್ನು ಪೊಲೀಸರು ರಾತ್ರೋರಾತ್ರಿ ಮಾಡಿದ್ದು ಕುಟುಂಬಸ್ಥರಿಗೆ ಅಂತ್ಯಕ್ರಿಯೆ ಮಾಡುವ ಅವಕಾಶವನ್ನು ನೀಡಿಲ್ಲ. ಹಾಗೆಯೇ ಕುಟುಂಬಸ್ಥರನ್ನು ಮನೆಯಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಈ ಘಟನೆಯ ಬಗ್ಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ಮೌನವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿಯ ಮೌನವನ್ನು ಪ್ರಶ್ನಿಸಿದ್ದಾರೆ. ಹಾಗೆಯೇ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ದ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಲ್ಲಿದೆ. ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹತ್ರಸ್ ಗ್ರಾಮದ ಒಳಗಡೆ ಮಾಧ್ಯಮದವರಿಗೆ ಅವಕಾಶ ನೀಡುತ್ತಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಆರೋಪಿಸಿದೆ.