ಬೆಂಗಳೂರು, ಅ. 02 (DaijiworldNews/HR): ಖಾಸಗಿ ಸಹಭಾಗಿತ್ವದಲ್ಲಿಕೊರೊನಾ ಪ್ರಯೋಗಾಲಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ವಾರದೊಳಗೆ ಟೆಂಡರ್ ಕರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಯೂರೋಫಿನ್ಸ್ ಕ್ಲಿನಿಕಲ್ ಜೆನೆಟಿಕ್ ಇಂಡಿಯಾ ಸಂಸ್ಥೆ ವೈಟ್ಫೀಲ್ಡ್ನಲ್ಲಿ ಸ್ಥಾಪಿಸಿರುವ ನೂತನ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಕೊರೊನಾ ಸೋಂಕಿತರ ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಿ ಅಗತ್ಯ ಮೂಲ ಸೌಲಭ್ಯ ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ ಎಂದರು.
ಇನ್ನು ಕೇವಲ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 144 ಕೊರೊನಾ ಪರೀಕ್ಷಾ ಲ್ಯಾಬ್ಗಳನ್ನು ಆರಂಭಿಸಲಾಗಿದೆ. ಈಗ ಉದ್ಘಾಟನೆಗೊಂಡ ಯುರೋಫಿನ್ಸ್ ಲ್ಯಾಬ್ 145 ನೆಯದು. ಇಲ್ಲಿ ದಿನಕ್ಕೆ 5 ಸಾವಿರ ಟೆಸ್ಟ್ ಭರವಸೆಯನ್ನು ಕಂಪನಿ ನೀಡಿದೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಸಾಕಷ್ಟು ಅರಿವು ಮೂಡಿಸಿದರೂ ಜನರು ಜಾಗೃತರಾಗದ ಕಾರಣ ಸೋಂಕು ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ ಮಾಸ್ಕ್ ಧರಿಸದ, ಸರ್ಕಾರದ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.