ಲಖನೌ, ಅ. 03 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ನಡೆಯನ್ನು ವಿರೋಧಿಸಿ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆ ಶುಕ್ರವಾರ ಈ ಪ್ರಕರಣವನ್ನು ಕೆಟ್ಟದಾಗಿ ನಿರ್ವಹಣೆ ಮಾಡಿದ ಆರೋಪದಲ್ಲಿ ಎಸ್ ಸೇರಿದಂತೆ ಐವರು ಪೊಲೀಸರ ಅಮಾನತು ಮಾಡಲಾಗಿದೆ.
ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದ್ದು ಶುಕ್ರವಾರ ವರದಿ ನೀಡಿದೆ. ಈ ವರದಿಯ ಆಧಾರದಲ್ಲಿ ಹತ್ರಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಾಂತ್ ವೀರ್ ಹಾಗೂ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಹಾಗೆಯೇ ಹತ್ರಸ್ ಜಿಲ್ಲೆಯ ನೂತನ ಎಸ್ಪಿ ಆಗಿ ವಿನೀತ್ ಜೈಸ್ವಾಲ್ ಅವರನ್ನು ನಿಯೋಜಿಸಲಾಗಿದೆ.
ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ ಹತ್ರಸ್ನ 19 ವರ್ಷದ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29 ರಂದು ಸಾವನ್ನಪ್ಪಿದಳು. ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ದುರುಳರು ಯುವತಿಯ ಮೂಳೆ ಮುರಿಯುವಂತೆ ಹಾಗೂ ನಾಲಿಗೆ ತುಂಡಾಗುವಂತೆ ಚಿತ್ರಹಿಂಸೆ ನೀಡಿದ್ದರು. ಇನ್ನು ಮೃತ ಯುವತಿಯ ದೇಹದ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರಿಗೆ ಮಾಡಲು ಅವಕಾಶ ನೀಡದ ಪೊಲೀಸರು ರಾತ್ರೋರಾತ್ರಿ ತರಾತುರಿಯಲ್ಲಿ ಯುವತಿಯ ದೇಹದ ಅಂತಿಮ ಸಂಸ್ಕಾರ ಮಾಡಿದ್ದು ಮಾತ್ರವಲ್ಲದೆ ಯುವತಿಯ ಕುಟುಂಬಸ್ಥರನ್ನು ಗೃಹ ಬಂಧನದಲ್ಲಿರಿಸಿದ್ದರು. ಈ ವಿಚಾರವಾಗಿ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಿದೆ.