ಬೆಂಗಳೂರು, ಅ. 03 (DaijiworldNews/HR): ಉತ್ತರ ಪ್ರದೇಶದ ಹತ್ರಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಆಕ್ರೋಶಗಳು ಮುಂದುವರಿದಿದ್ದು, ಇಂದು ಸಂತ್ರಸ್ಥೆಯ ಕುಟುಂಬವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಭೇಟಿ ಮಾಡಲಿದೆ.
ಹತ್ರಸ್ ಗೆ ರಾಹುಲ್ ಗಾಂಧಿ ಇಂದು ಪಕ್ಷದ ಸಂಸದರೊಂದಿಗೆ ಭೇಟಿನೀಡಲಿದ್ದು, ಸಂತ್ರಸ್ಥ ಯುವತಿಯ ಕುಟುಂಬದವರೊಂದಿಗೆ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಇನ್ನು ಹತ್ರಸ್ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಗ್ರಾಮವನ್ನು ಪೊಲೀಸರು ಬ್ಲಾಕ್ ಮಾಡಿದ್ದಾರೆ.
ಹತ್ರಸ್ ಗೆ ಮಾಧ್ಯಮಗಳಿಗೂ ಅವಕಾಶ ನೀಡುತ್ತಿರಲಿಲ್ಲ, ಆದರೆ ಖಾಸಗಿ ಚಾನೆಲ್ ವೊಂದು ಸಂತ್ರಸ್ಥೆಯ ಕುಟುಂಬ ಸದಸ್ಯರೊಬ್ಬರನ್ನು ಭೇಟಿ ಮಾಡಿದ್ದು, ತಮ್ಮನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಇಡಲಾಗಿದ್ದು, ಒತ್ತಡ ಮತ್ತು ಭಯದಿಂದ ಬದುಕುತ್ತಿರುವುದಾಗಿ ಅವರು ತಿಳಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.