ಭೋಪಾಲ್, ಅ. 03 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ಆಕ್ರೋಶ ಭುಗಿಳೆದ್ದಿರುವ ನಡುವೆಯೇ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು 32 ವರ್ಷದ ಮಹಿಳೆಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 28ರಂದು 32 ವರ್ಷದ ಮಹಿಳೆಯು ತನ್ನ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಲು ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸರು ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಮಾಹಿತಿಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಈ ಘಟನೆಯ ಬಳಿಕ ಶುಕ್ರವಾರ ಈ ಅತ್ಯಾಚಾರ ಸಂತ್ರಸ್ತೆಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆದೇಶಿಸಿದ್ದಾರೆ ಹಾಗೆಯೇ ಈ ಸಂತ್ರಸ್ತೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ ಸಂದರ್ಭ ದೂರು ದಾಖಲಿಸಿಕೊಳ್ಳದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.