ನವದೆಹಲಿ, ಅ. 03 (DaijiworldNews/MB) : ಹತ್ರಸ್ ಸಾಮೂಹಿಕ ಅತ್ಯಾಚಾರದ ಬಳಿಕ ಸಾವನ್ನಪ್ಪಿದ ಯುವತಿಯ ಮನೆಗೆ ಗುರುವಾರ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಅವರು ತೆರಳುತ್ತಿದ್ದ ಸಂದರ್ಭ ಅವರನ್ನು ತಡೆದು ಬಂಧಿಸಿದ್ದರ ವಿರುದ್ದ ಹಾಗೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಕ್ಟೋಬರ್ 5 ರಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ದೇಶಾದ್ಯಂತ 'ಸತ್ಯಾಗ್ರಹ' ವನ್ನು ನಡೆಸಲಿದೆ.
ಈ ಬಗ್ಗೆ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಲ್ಲಾ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಸುತ್ತೋಲೆ ಹೊರಡಿಸಿದ್ದು ಯುಪಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ತಿಳಿಸಿದ್ದಾರೆ. ಹಾಗೆಯೇ ಈ ಸತ್ಯಾಗ್ರಹದಲ್ಲಿ ಆಯಾ ಜಿಲ್ಲೆಯಲ್ಲಿರುವ ಸಂಸದರು, ಶಾಸಕರು ಮತ್ತು ಮಾಜಿ ಸಾರ್ವಜನಿಕ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಮುಖಂಡರು ಭಾಗಿಯಾಗಬೇಕು ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಕಾರ್ಯಕ್ರಮದ ರೂಪುರೇಷೆಯನ್ನು ಶೀಘ್ರವೇ ಕಾಂಗ್ರೆಸ್ ಪ್ರಧಾನ ಕಚೇರಿಗೆ ಕಳುಹಿಸುವಂತೆ ಪಕ್ಷವು ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡರಿಗೆ ತಿಳಿಸಿದೆ.
ಹತ್ರಸ್ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ಸಂಸ್ರಸ್ತೆಯ ಕಟುಂಬಸ್ಥರನ್ನು ಭೇಟಿಯಾಗಲು ಗುರುವಾರ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಹತ್ರಸ್ಗೆ ತೆರಳುತ್ತಿದ್ದ ಸಂದರ್ಭ ಅವರ ಬೆಂಗಾವಲು ವಾಹನವನ್ನು ನೋಯ್ಡಾದಲ್ಲಿ ತಡೆಯಲಾಯಿತು. ಈ ಸಂದರ್ಭದಲ್ಲಿ ಇಬ್ಬರು ನಾಯಕರುಗಳು ಕಾರಿನಿಂದ ಕೆಳಗಿಳಿದು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲೇ ಹತ್ರಸ್ಗೆ ತೆರಳುತ್ತಿದ್ದ ಸಂದರ್ಭ ಪೊಲೀಸರು ರಾಹುಲ್ ಅವರ ಕುತ್ತಿಗೆ ಹಿಡಿದು ನೆಲಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ರಾಹುಲ್ ಹಾಗೂ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಅವರನ್ನು ಶೀಘ್ರವೇ ಬಿಡುಗಡೆ ಮಾಡಿ ದೆಹಲಿಗೆ ವಾಪಾಸ್ ಕಳುಹಿಸಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ರಾಹುಲ್ ಗಾಂಧಿ ಅವರು, "ಇದೀಗ ಪೊಲೀಸರು ನನ್ನನ್ನು ತಳ್ಳಿದರು, ಲಾಠಿ ಚಾರ್ಜ್ ಮಾಡಿ ನನ್ನನ್ನು ನೆಲಕ್ಕೆ ದೂಡಿದರು. ನಾನು ಕೇಳಲು ಬಯಸುತ್ತೇನೆ, (ಪ್ರಧಾನಿ ನರೇಂದ್ರ ಮೋದಿ) ಮೋದಿಜಿ ಮಾತ್ರ ಈ ದೇಶದಲ್ಲಿ ನಡೆಯಲು ಸಾಧ್ಯವೇ?. ಸಾಮಾನ್ಯ ವ್ಯಕ್ತಿ ನಡೆಯಲು ಸಾಧ್ಯವಿಲ್ಲವೇ?" ಎಂದು ಪ್ರಶ್ನಿಸಿದ್ದು "ನಮ್ಮ ವಾಹನವನ್ನು ತಡೆಯಲಾಯಿತು, ಆದ್ದರಿಂದ ನಾವು ಕಾಲ್ನಡಿಗೆಯಲ್ಲಿ ಮುನ್ನಡೆದೆವು" ಎಂದು ಹೇಳಿದ್ದರು.
ಶುಕ್ರವಾರ ಟ್ವೀಟ್ ಮಾಡಿದ್ದ ಪ್ರಿಯಾಂಕಾ ಗಾಂಧಿ ಅವರು, ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಿ. ಯುಪಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಿಮಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.