ಶಿಮ್ಲಾ, ಅ. 03 (DaijiworldNews/HR): ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಹಿಮಾಚಲ ಪ್ರದೇಶದ ರೋಹ್ಟಾಂಗ್ನಲ್ಲಿ ಉದ್ಘಾಟಿಸಿದ್ದಾರೆ.
ಅಟಲ್ ಸುರಂಗ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಭಾಗವಹಿಸಿದ್ದರು.
ಅಟಲ್ ಸುರಂಗವು ವಿಶ್ವದ ಅತೀ ಉದ್ದದ ಸುರಂಗವಾಗಿದ್ದು, ಇದು ಸುಮಾರು 9.02 ಕಿ.ಮೀ ಉದ್ದವಿದೆ. ಇದು ಮನಾಲಿಯನ್ನು ಲೇಹ್ಗೆ ಸಂಪರ್ಕಿಸುತ್ತದೆ. ಈ ಮಾರ್ಗ ಮನಾಲಿ ಹಾಗೂ ಲೇಹ್ ನಡುವಿನ ಅಂತರವನ್ನು 46 ಕಿ.ಮೀ ನಷ್ಟು ಕಡಿಮೆ ಮಾಡುತ್ತದೆ. ಅಲ್ಲದೇ, ನಾಲ್ಕರಿಂದ ಐದು ಗಂಟೆಗಳ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ.
ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3000 ಮೀಟರ್ (10,000 ಅಡಿ) ಎತ್ತರದಲ್ಲಿ ಅತ್ಯಾಧುನಿಕ ವಿಶೇಷ ತಂತ್ರಜ್ಞಾನದೊಂದಿಗೆ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ. ಅಟಲ್ ಸುರಂಗವನ್ನು ಪೂರ್ಣಗೊಳಿಸಲು ಅಂದಾಜು ಅವಧಿ ಆರು ವರ್ಷಗಳಿಗಿಂತ ಕಡಿಮೆ ಇತ್ತು. ಆದರೆ, ಈ ಸುರಂಗ 10 ವರ್ಷಗಳಲ್ಲಿ ಪೂರ್ಣಗೊಂಡಿದೆ.
ಈ ಹಿಂದೆ ವರ್ಷದ ಆರು ತಿಂಗಳು ಈ ಮಾರ್ಗದಲ್ಲಿ ಹಿಮಪಾತವಾಗುತ್ತಿದ್ದ ಕಾರಣ ಅರ್ಧ ವರ್ಷ ಸಂಚಾರವನ್ನು ನಿರ್ಬಂಧಿಸಲಾಗುತ್ತಿತ್ತು. ಇದೀಗ ಈ ಸುರಂಗ ನಿರ್ಮಾಣವಾದ್ದರಿಂದ ವರ್ಷಪೂರ್ತಿ ಈ ಮಾರ್ಗವಾಗಿ ಸಂಚರಿಸಬಹುದಾಗಿದೆ.
ಅಟಲ್ ಸುರಂಗದ ದಕ್ಷಿಣ ಪೋರ್ಟಲ್ (ಎಸ್ಪಿ) ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3,060 ಮೀಟರ್ ಎತ್ತರದಲ್ಲಿದೆ, ಸುರಂಗದ ಉತ್ತರ ಪೋರ್ಟಲ್ (ಎನ್ಪಿ) ಲಾಹೌಲ್ ಕಣಿವೆಯ ಸಿಸ್ಸು ಎಂಬ ಹಳ್ಳಿಯ ಟೆಲ್ಲಿಂಗ್ ಬಳಿ ಇದೆ.