ಬೆಂಗಳೂರು, ಅ. 03 (DaijiworldNews/MB) : ಜಾತಿ ಗಣತಿಯ ವರದಿಯನ್ನು ಕೂಡಲೇ ಸರ್ಕಾರ ಸ್ವೀಕರಿಸಬೇಕು. ಇಲ್ಲದಿದ್ದರೆ ಒಕ್ಕೂಟ ಪ್ರತಿಭಟನೆ ನಡೆಸುತ್ತದೆ. ಇದರಲ್ಲಿ ನಾನು ಕೂಡಾ ಭಾಗಿಯಾಗುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಶನಿವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸರ್ಕಾರ ಕೂಡಲೇ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸ್ವೀಕಾರ ಮಾಡಬೇಕು. 1931ರ ಬಳಿಕ ಜಾತಿ ಜನಗಣತಿ ಮಾಡಿರದ ಹಿನ್ನೆಲೆ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಜಾತಿಗಣತಿ ಮಾಡಲಾಗಿದೆ. ಆದರೆ ಈಗಿನ ಬಿಎಸ್ವೈ ನೇತೃತ್ವದ ಸರ್ಕಾರ ಈ ಜನಗಣತಿಯ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ'' ಎಂದು ಆರೋಪಿಸಿದರು.
''ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸಮೀಕ್ಷೆ ಸಂಪೂರ್ಣವಾಗಿರದ ಹಿನ್ನೆಲೆ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭ ಈ ಆಯೋಗ ವರದಿ ನೀಡುವ ಯತ್ನ ಮಾಡಿದೆ. ಆದರೆ ಆಗ ಸರ್ಕಾರ ಸ್ವೀಕರಿಸಿರಲಿಲ್ಲ. ಬಳಿಕ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ. ಈ ಸರ್ಕಾರ ಆಯೋಗದ ಅಧ್ಯಕ್ಷ, ಸದಸ್ಯರನ್ನು ವಜಾಗೊಳಿಸಿತು. ಕೊನೆಗೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಆಯೋಗದ ಸದಸ್ಯ ಕಾರ್ಯದರ್ಶಿಗೆ ವರದಿ ನೀಡಿದರು. ಆದರೆ ಸರ್ಕಾರ ಈವರೆಗೂ ಈ ವರದಿಯನ್ನು ಸ್ವೀಕರಿಸೇ ಇಲ್ಲ, ನಿಜವಾಗಿ ಈ ಗಣತಿಯನ್ನು ಕೇಂದ್ರ ಸರ್ಕಾರ ಮಾಡಬೇಕು. ಆದರೆ ಇದನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗವೇ ಮಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಸಮೀಕ್ಷೆ ನಡೆದ ಬಳಿಕ ಸರ್ಕಾರ ವರದಿಯನ್ನೇ ಸ್ವೀಕರಿಸಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಈ ಸಮೀಕ್ಷೆಗಾಗಿ ಸರ್ಕಾರ 158 ಕೋಟಿ ವ್ಯಯಿಸಿದೆ. ಇದು ಬರಿ ಜಾತಿಯ ಲೆಕ್ಕಾಚಾರದ ವರದಿಯಲ್ಲ ಬದಲಾಗಿ ಮೀಸಲಾತಿ ನಿಗದಿ, ಸರ್ಕಾರಿ ಯೋಜನೆಗಳನ್ನು ಮಾಡಲು ಸಹಾಯವಾಗುವ ನಿಟ್ಟಿನಲ್ಲಿ ಮಾಡಲಾಗಿದೆ. ರಾಜ್ಯ ಸರ್ಕಾರ ಈವರೆಗೂ ದೇಶದ ಯಾವುದೇ ರಾಜ್ಯದಲ್ಲಿಯೂ ಕೂಡಾ ಈ ರೀತಿಯ ವಿಸ್ತೃತ ಸಮೀಕ್ಷೆ ನಡೆದಿಲ್ಲ'' ಎಂದು ಹೇಳಿದರು.