ಮಡಿಕೇರಿ, ಅ. 03(DaijiworldNews/PY): ಮೂಳೆ ಇಲ್ಲದ ನಾಲಿಗೆ ಏನಾದರೂ ಹೇಳುತ್ತದೆ ಎಂದು ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಕೆಪಿಸಿಸಿ ಅಧ್ಯಕ್ಷ ಡ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೂಡಾ ಸುರೇಶ್ ಅಂಗಡಿ ಅವರ ಬಗ್ಗೆ ವಿಶೇಷವಾದ ಗೌರವವಿದೆ. ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಅವರ ಮೇಲೆ ಗೌರವವಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೃತಪಟ್ಟ ಸಂದರ್ಭ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಲಿಲ್ಲ ಎಂದು ಹೇಳಿದರು.
ಕೊರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸುರೇಶ್ ಅಂಗಡಿ ಅವರ ಮೃತದೇಹವನ್ನ ಹೇಗೆ ಬೆಳಗಾವಿಗೆ ತರಬೇಕಿತ್ತು. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಇದನ್ನು ರಾಜ್ಯ, ಕೇಂದ್ರ ಸರ್ಕಾರಗಳು ಚಾಚೂ ತಪ್ಪದೇ ಪಾಲಿಸುತ್ತಿವೆ. ಈ ವಿಚಾರವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಸಿ.ಟಿ.ರವಿ ಅವರು, ಎರಡು ಸ್ಥಾನ ಅಲ್ಲ ನಾಲ್ಕು ಸ್ಥಾನ ಕೊಟ್ಟರೂ ನಿಭಾಯಿಸುತ್ತಾರೆ. ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನ ಆಶಯ. ಸಿ.ಟಿ.ರವಿ ನನಗಿಂತ ಬುದ್ದಿವಂತ ಹಾಗೂ ಕಿಲಾಡಿಯಾಗಿದ್ದಾರೆ ಎಂದು ಹೇಳಿದರು.