ನವದೆಹಲಿ, ಅ. 03 (DaijiworldNews/HR): ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ 6 ತಿಂಗಳವರೆಗೆ ಸಾಲ ಪಾವತಿ ಮೇಲಿನ ವಿನಾಯಿತಿ ಅವಧಿಯಲ್ಲಿ 2 ಕೋಟಿ ರೂಪಾಯಿಯವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ.
2 ಕೋಟಿ ರೂಪಾಯಿಯವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿಯ ಮನ್ನಾ ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳ ಸಾಲಗಳು, ಶಿಕ್ಷಣ ಸಾಲಗಳು, ಗೃಹ ಸಾಲಗಳು, ಗ್ರಾಹಕ ಬಾಳಿಕೆ ಬರುವ ಸಾಲಗಳು, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲಗಳು, ವೃತ್ತಿಪರ ಮತ್ತು ಬಳಕೆ ಸಾಲಗಳಿಗೆ ವೈಯಕ್ತಿಕ ಸಾಲಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.
ಇನ್ನು ಚಕ್ರಬಡ್ಡಿ ಮನ್ನಾದಿಂದ ಆಗುವ ಆರ್ಥಿಕ ಹೊರೆಯನ್ನು ಬ್ಯಾಂಕುಗಳು ಭರಿಸುವುದು ಕಷ್ಟಸಾಧ್ಯವಾಗಿದ್ದು, ಸರ್ಕಾರ ಬಡ್ಡಿಮನ್ನಾವನ್ನು ಸಾಲಪಡೆದ ಅತ್ಯಂತ ದುರ್ಬಲ ವರ್ಗಕ್ಕೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ತಿಳಿಸಿದೆ.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಎಸ್ ರೆಡ್ಡಿ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಕೊರೊನಾದ ನಂತರ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಬ್ಯಾಂಕಿನಿಂದ ಸಾಲ ಪಡೆದುಕೊಂಡ ಅನೇಕರಿಗೆ ಸಮಸ್ಯೆಯಾಗಿರುವುದರಿಂದ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದು, ಅದರಂತೆ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.