ನವದೆಹಲಿ, ಅ. 03 (DaijiworldNews/MB) : ''ಹತ್ರಸ್ ಅತ್ಯಾಚಾರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹತ್ರಸ್ ಭೇಟಿಯು ರಾಜಕೀಯ ಮಾತ್ರ ಇದರಲ್ಲಿ ಕುಟುಂಬಕ್ಕೆ ನ್ಯಾಯ ಒದಗಿಸುವ ಯಾವ ಉದ್ದೇಶವೂ ಇಲ್ಲ'' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ಕಾಂಗ್ರೆಸ್ ಎಲ್ಲಾ ತಂತ್ರಗಾರಿಕೆಯ ಬಗ್ಗೆ ದೇಶದ ಜನರಿಗೆ ತಿಳಿದಿದೆ. ಅದು 2019ರ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಆಗುವುದರಿಂದ ಸಾಬೀತಾಗಿದೆ. ಅವರದ್ದು ಬರೀ ರಾಜಕೀಯ'' ಎಂದು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ ಹತ್ರಸ್ನ 19 ವರ್ಷದ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 29 ರಂದು ಸಾವನ್ನಪ್ಪಿದರು. ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ದುರುಳರು ಯುವತಿಯ ಮೂಳೆ ಮುರಿಯುವಂತೆ ಹಾಗೂ ನಾಲಿಗೆ ತುಂಡಾಗುವಂತೆ ಚಿತ್ರಹಿಂಸೆ ನೀಡಿದ್ದರು. ಇನ್ನು ಮೃತ ಯುವತಿಯ ದೇಹದ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರಿಗೆ ಮಾಡಲು ಅವಕಾಶ ನೀಡದ ಪೊಲೀಸರು ರಾತ್ರೋರಾತ್ರಿ ತರಾತುರಿಯಲ್ಲಿ ಯುವತಿಯ ದೇಹದ ಅಂತಿಮ ಸಂಸ್ಕಾರ ಮಾಡಿದ್ದು ಮಾತ್ರವಲ್ಲದೆ ಯುವತಿಯ ಕುಟುಂಬಸ್ಥರನ್ನು ಗೃಹ ಬಂಧನದಲ್ಲಿರಿಸಿದ್ದರು. ಈ ವಿಚಾರವಾಗಿ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಿದೆ.
ಪ್ರಸ್ತುತ ಈ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದ್ದು ಶುಕ್ರವಾರ ವರದಿ ನೀಡಿದೆ. ಈ ವರದಿಯ ಆಧಾರದಲ್ಲಿ ಹತ್ರಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿಕ್ರಾಂತ್ ವೀರ್ ಹಾಗೂ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಹಾಗೆಯೇ ಹತ್ರಸ್ ಜಿಲ್ಲೆಯ ನೂತನ ಎಸ್ಪಿ ಆಗಿ ವಿನೀತ್ ಜೈಸ್ವಾಲ್ ಅವರನ್ನು ನಿಯೋಜಿಸಲಾಗಿದೆ.