ಭುವನೇಶ್ವರ, ಅ. 03(DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿರುವವರೆಗೂ ಕನಿಷ್ಟ ಬೆಂಬಲ ಬೆಲೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ರೈತರಿಗೆ ಮೋಸ ಮಾಡಿದ ಜನರು ಈಗ ಸುಖಾ ಸುಮ್ಮನೆ ಕಣ್ಣೀರು ಹಾಕುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿರುವವರೆಗೂ ಎಂಎಸ್ಪಿಯನ್ನು ತೆಗೆದು ಹಾಕುವ ಪ್ರಶ್ನೆಯೇ ಇಲ್ಲ. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರವು ಕೃಷಿ ಮೂಲಸೌಕರ್ಯ ನಿಧಿಗೆ 1 ಲಕ್ಷ ಕೋಟಿ ರೂ ವ್ಯಯ ಮಾಡಿದೆ. ಈ ಹಿಂದೆ ರೈತರಿಗೆ ವಂಚಿಸಿದ್ದ ಜನರು ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಜನರ ಹಾದಿ ತಪ್ಪಿಸಲು ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದರೂ ಕೂಡಾ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಆದರೆ ಹೊಸ ಕಾಯಿದೆಗಳಿಂದಾಗಿ ಅವರು ಸ್ವತಂತ್ರರಾಗುತ್ತಿದ್ದಾರೆ. ಅವರ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಸಿಗಲಿದೆ ಎಂದಿದ್ದಾರೆ.