ಮುಂಬೈ, ಅ. 04(DaijiworldNews/PY): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ತನಿಖೆ ಶಕ್ತವಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಅದು ಕೊಲೆಯಲ್ಲ ಎಂದು ಏಮ್ಸ್ ವೈದ್ಯ ಡಾ. ಸುಧೀರ್ ಗುಪ್ತಾ ಅವರು ಶನಿವಾರ ತಿಳಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ತನಿಖೆಯ ಬಗ್ಗೆ ಏನೂ ತಿಳಿಯದೆ ಮುಂಬೈ ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ತನಿಖೆಯಲ್ಲಿ ನ್ಯಾಯಾಲಯ ಯಾವ ದೋಷವನ್ನು ಕಂಡುಹಿಡಿಯಲಿಲ್ಲ. ನಮ್ಮ ತನಿಖೆ ವೃತ್ತಿಪರವಾಗಿದೆ. ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಶವಪರೀಕ್ಷೆ ಮಾಡಿದ್ದು, ಅವರೂ ಕೂಡ ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಹೇಳಿದ್ದಾರೆ.
ನಮ್ಮ ತನಿಖೆಯ ಬಗ್ಗೆ ಏನೂ ತಿಳಿಯದೆ ಹಾಗೂ ನಮ್ಮ ವರದಿಯನ್ನು ನೋಡದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ತನಿಖೆಯನ್ನು ಟೀಕಿಸಿವೆ ಎಂದಿದ್ದಾರೆ.
ಮುಂಬೈನ್ ಬಾಂದ್ರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಜೂನ್ 14ರಂದು ಸುಶಾಂತ್ ಸಿಂಗ್ ಅವರ ಮೃತದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ದ ದೂರು ನೀಡಿದ್ದರು. ಈ ದೂರಿನ ಪ್ರಕಾರ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದು, ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರು.