ಕೊಚ್ಚಿ,ಅ. 04 (DaijiworldNews/HR): ಕೇರಳದ ಕೊಚ್ಚಿಯಲ್ಲಿ ಗ್ಲೈಡರ್ ವಿಮಾನ ಪತನವಾಗಿ ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಮೃತರಾದ ಅಧಿಕಾರಿಗಳನ್ನು ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ.
ವಿಮಾನವು ಕೊಚ್ಚಿಯ ತೊಪ್ಪುಂಪಾಡಿ ಸೇತುವೆ ಬಳಿ ಪತನವಾಗಿದ್ದು, ಐಎನ್ ಎಸ್ ಗರುಡಾದಿಂದ ದಿನನಿತ್ಯದ ತರಬೇತಿಗಾಗಿ ಗ್ಲೈಡರ್ ಹೊರಟಿತ್ತು ಎಂದು ವರದಿ ತಿಳಿಸಿದೆ.
ಇಂದು ಮುಂಜಾನೆ ಏಳು ಗಂಟೆಯ ಸುಮಾರಿಗೆ ತೊಪ್ಪುಂಪಾಡಿ ಸೇತುವೆ ಬಳಿ ಪತನವಾಗಿ ಬಿದ್ದಿದ್ದು, ನೌಕಾಪಡೆಯ ಅಧಿಕಾರಿಗಳನ್ನು ಕೂಡಲೇ ಸ್ಥಳೀಯ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದರೂ, ಅವರು ಬದುಕಿ ಉಳಿಯಲಿಲ್ಲ ಎಂದು ತಿಳಿದು ಬಂದಿದೆ.